ಹನ್ನೆರಡನೆಯ ಶತಮಾನದಲ್ಲಿ ಸಾಮಾಜಿಕ ಧಾರ್ಮಿಕ ಸಾಹಿತ್ಯಿಕ  ಆರ್ಥಿಕ  ಬೌದ್ಧಿಕ ಕ್ರಾಂತಿ ಮಾಡಿದ ಬಸವಣ್ಣನವರು ನಮಗೆ ಈಗಲೂ ಪ್ರಸ್ತುತವೆ
ಜಾತಿ ವೈಷಮ್ಯ ಧರ್ಮದ ಕಲಹ ಭ್ರಷ್ಟಾಚಾರ  ಅತ್ಯಾಚಾರ  ಕೊಲೆ ಅಧಿಕಾರ ದಾಹ ಮೋಸ ವಂಚನೆ ಮೆರೆಯುತ್ತಿರುವ ಇಂಥಹ ದಿನಮಾನಗಳಲ್ಲಿ ಬಸವ ಸಂದೇಶಗಳು ಬೆಳಕಾಗಬಲ್ಲವೇ

ತಾನುವಮಾಡಿದ ತಪ್ಪನ್ನು  ಮುಚ್ಚಿಡುವ ಸಲುವಾಗಿ
ತನ್ನ ತಪ್ಪುಗಳು ಹೊರಬಾರದಂತೆ ತಡೆಯಲು ಅನೇಕ ಸುಳ್ಳು ಹರಡುವ ನಮಗೆ ಬಸವಣ್ಣನವರ ಹುಸಿಯ ನುಡಿಯಬೇಡ ಎಂಬ ವಾಕ್ಯ  ಅವಶ್ಯಕತೆ ಇದೆಯೇ

ನಮ್ಮ ಅಧಿಕಾರವನ್ನು ಪ್ರಶ್ನೆ ಮಾಡುವವರನ್ನು  ನಮ್ಮ ತಪ್ಪುಗಳನ್ನು ಹೇಳುವವರನ್ನು ಕೊಲೆ ಮಾಡಿಸುವ ಹಿಂಸಿಸುವ ನಮಗೆ  ಕೊಲಬೇಡ ಎಂದು ಹೇಳಿದ ಬಸವಣ್ಣನವರು ಬೇಕಾ

ತನ್ನ ಬಗ್ಗೆ ತಾನೇ ಹೊಗಳಿಕೊಳ್ಳುವ ಇನ್ನೊಬ್ಬರ ತಪ್ಪುಗಳನ್ನೇ ದೊಡ್ಡದು ಮಾಡಿ ಅಸಹ್ಯ ಪಡುವ ನಮಗೆ  ತನ್ನ ಬಣ್ಣಿಸಬೇಡ  ಅನ್ಯರಿಗೆ ಅಸಹ್ಯ ಪಡಬೇಡ ಎಂದ ಬಸವಣ್ಣನವರು ನಮಗೆ ಬೇಕಾ

ಸಿಕ್ಕ ಸಿಕ್ಕ ಮಹಿಳೆಯರ ಮೇಲೆ ಬಲತ್ಕಾರ ಮಾಡುವ ನಮಗೆ  ಛಲಬೇಕು ಶರಣಂಗೆ ಪರಸತಿಯರನು ಒಲ್ಲೇ ಎಂಬ ಎಂಬ ಮಾತುಗಳನ್ನು ಹೇಳಿದ ಬಸವಣ್ಣನವರು ನಮಗೆ ಬೇಕಾ

ಸಿಕ್ಕ ಸಿಕ್ಕಲ್ಲಿ ದೋಚುವ ಬಡವರಿಗೆ ಮೋಸ ಮಾಡಿ ಸಂಪತ್ತು ಕ್ರೋಡಿಕರಣ ಮಾಡುವ ಅಧಿಕಾರಿಗಳು  ರಾಜಕಾರಣಿಗಳು  ಮಠಾಧೀಶರುಗಳಿಗೆ ಜೈಜೈ ಎನ್ನುವ ನಮಗೆ  ಹೊನ್ನಿನೊಳಗೆ ಒಂದು ಎಳೆಯ ಅನ್ನದೊಳಗೆ ಒಂದು ಅಗುಳ ಇಂದಿಂಗೆ ನಾಳೆಗೆ ಎಂದು ಎತ್ತಿಟ್ಟೆನಾದರೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ ಎಂದ ಬಸವಣ್ಣನವರು ನಮಗೆ ಬೇಕಾ

ಮನೆಗೆ ಬರುವ  ವ್ಯಕ್ತಿಯ ಹುಟ್ಟು ಆತನ ಜಾತಿ ಆತನ ವೃತ್ತಿ ಬಗ್ಗೆ ತಿಳಿದುಕೊಂಡು ಆತನಿಗೆ ಗೌರವ ಕೊಡುವ ಕೀಳಾಗಿ ಕಾಣುವ ನಮಗೆ 
ದೇವ ಸಹಿತ ಭಕ್ತ ಮನೆಗೆ ಬಂದರೆ ಕಾಯಕ ಯಾವುದೆಂದು ಬೆಸಗೊಂಡಡೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ ಎಂದ  ಬಸವಣ್ಣನವರು ನಮಗೆ ಬೇಕಾ

ಕೆಲವು ಜಾತಿಗಳು ಶ್ರೇಷ್ಠ ಕೆಲವು ಜಾತಿಗಳು ಕನಿಷ್ಠ ಎಂದು ಕೀಳಾಗಿ ಕಾಣುವ ನಮಗೆ
ನೆಲನೊಂದೇ ಹೊಲಗೇರಿ ಶಿವಾಲಯಕೆ
ಜಲ ಒಂದೇ ಶೌಚ ಮತ್ತು  ಪೂಜೆಗೆ ಎಂದು ಸಮಾನತೆ ಸಾರಿದ ಬಸವಣ್ಣನವರು ನಮಗೆ ಬೇಕಾ

ಕೆಲವು ಜನರನ್ನು ಹತ್ತಿರಕ್ಕೊ ಸೇರಿಸಲು ಇಷ್ಟ ಪಡದೆ ಇರುವ ನಮಗೆ 
ಅಪ್ಪನು ನಮ್ಮ ಮಾದಾರ ಚನ್ನಯ್ಯ ಬೊಪ್ಪನು ನಮ್ಮ ಡೋಹರ ಕಕ್ಕಯ್ಯ ಅಣ್ಣನು ನಮ್ಮ ಕಿನ್ನರಿ ಬೊಮ್ಮಯ್ಯ ಎಂದು ಎಲ್ಲರನ್ನೂ ಅಪ್ಪಿಕೊಂಡ ಬಸವಣ್ಣನವರು ನಮಗೆ ಬೇಕಾ

ಕಾಯಕಕ್ಕಿಂತಲೂ ಪೂಜೆ ದೇವರು ಧರ್ಮ ಎಂದು ಶೋಷಣೆಗೆ ಒಳಗಾಗುವ ನಮಗೆ 
ಪೂಜೆ ಜಪ ತಪ ಮಂತ್ರಗಳಿಗಿಂತಲೂ ಕಾಯಕವೇ ಶ್ರೇಷ್ಠ ಎಂದ ಬಸವಣ್ಣನವರು ನಮಗೆ ಬೇಕಾ

ಶೋಷಣೆಯ ಕೇಂದ್ರಗಳು ಅಜ್ಞಾನ ಬಿತ್ತುವ ಅಸಮಾನತೆ ಸೃಷ್ಟಿ ಮಾಡುವ ದೇವಸ್ಥಾನ ತಿರಸ್ಕರಿಸಿ ದೇಹವೇ ದೇಗುಲ ಮಾಡಿದ ಬಸವಣ್ಣನವರು ನಮಗೆ ಬೇಕಾ

ಅಧಿಕಾರದಲ್ಲಿ ಮುಂದುವರೆಯಲು ಏನೇನೋ ತಂತ್ರ ಕುತಂತ್ರ ಮಾಡುವ ನಮಗೆ 
ಬ್ರಹ್ಮ ಪದವಿಯನೊಲ್ಲೆ ವಿಷ್ಣು ಪದವಿಯ ನೊಲ್ಲೆ ರುದ್ರ ಪದವಿಯನೂ ಸಹ ಒಲ್ಲೆ ಎಂದ ಬಸವಣ್ಣನವರು ನಮಗೆ ಬೇಕಾ

ವೇದ ಶಾಸ್ತ್ರ ಸಂಪ್ರದಾಯ  ಪುರಾಣಗಳ ಮೇಲೆ ಅವಲಂಬಿತರಾಗಿರುವ ನಮಗೆ 
ವೇದಕ್ಕೆ ಹೊರೆಯ ಕಟ್ಟುವೆ  ಶಾಸ್ತ್ರಕ್ಕೆ ನಿಗಳವನಿಕ್ಕುವೆ ಆಗಮದ ಮೂಗ ಕೊಯ್ಯುವೆ ಎಂದ ಬಸವಣ್ಣನವರು ನಮಗೆ ಬೇಕಾ

ಶರಣ ಬಂಧುಗಳೇ ಚಿಂತಿಸಿ ಎಂದೆಂದಿಗಿಂತಲೂ ಈಗ ಬಸವಣ್ಣನವರ ವಿಚಾರಗಳು ಅತ್ಯವಶ್ಯಕವಾಗಿವೆ ಅವುಗಳನ್ನು ನಾವು ಪಾಲಿಸುವ ಮೂಲಕ ದೇಶದಲ್ಲಿ ತಲೆದೂರೂರಿರುವ ಕಲುಷಿತ ವಾತವರಣವನ್ನು ತಿಳಿಗೊಳಿಸುವ ಸಣ್ಣ ಪ್ರಯತ್ನ ನಮ್ಮಿಂದಲೇ ಆರಂಭ ಆಗಲಿ
ಅದಕ್ಕಾಗಿ ಈ ಬಾರಿಯ ಬಸವ ಜಯಂತಿ ಸಾಕ್ಷಿಯಾಗಲಿ

ಸುಖವೊಂದು ಕೋಟ್ಯಾನುಕೋಟಿ ಬಂದಲ್ಲಿ ಬಸವಣ್ಣನ ನೆನೆವೆ. ದುಃಖವೊಂದು ಕೋಟ್ಯಾನುಕೋಟಿ ಬಂದಲ್ಲಿ ಬಸವಣ್ಣನ ನೆನೆವೆ. ಲಿಂಗಾರ್ಚನೆಯ ಮಾಡುವಲ್ಲಿ ಬಸವಣ್ಣನ ನೆನೆವೆ. ಜಂಗಮಾರ್ಚನೆಯ ಮಾಡುವಲ್ಲಿ ಬಸವಣ್ಣನ ನೆನೆವೆ. ಬಸವಣ್ಣನ ನೆನೆದಲ್ಲದೆ ಭಕ್ತಿಯಿಲ್ಲ. ಬಸವಣ್ಣನ ನೆನೆದಲ್ಲದೆ ಮುಕ್ತಿಯಿಲ್ಲ. ಇದು ಕಾರಣ, ಬಸವಣ್ಣ ಬಸವಣ್ಣ ಎನುತಿರ್ದೆನು ಕಾಣಾ, ಕಲಿದೇವಯ್ಯ.

ಮಡಿವಾಳ ಮಾಚಿದೇವ

ಶರಣು ಶರಣಾರ್ಥಿ ಗಳೊಂದಿಗೆ


ವಿಶ್ವೇಶ್ವರಯ್ಯ ಬಸವಬಳ್ಳಿ