ಕೇವಲ ನಾಲ್ಕು ತಿಂಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಬ್ಲೇಡ್ ಕಂಪನಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಸುಮಾರು 20 ಕೋಟಿಗೂ ಹೆಚ್ಚು ಹಣ ವಂಚನೆಯಾಗಿದೆ…….

ಹಣ ದ್ವಿಗುಣ, ಹೆಚ್ಚಿನ ಬಡ್ಡಿ ಮತ್ತು ಲಾಭದ ದುರಾಸೆಯಿಂದ  ಹಣಕಾಸಿನ ವ್ಯವಹಾರಗಳಲ್ಲಿ ಮೋಸ ಹೋಗುವ ಘಟನೆಗಳನ್ನು ನಾವು ಬಹಳ ಹಿಂದಿನಿಂದಲೂ ಕೇಳುತ್ತಲೇ ಬಂದಿದ್ದೇವೆ‌ ಮತ್ತು ‌ಈಗಲೂ ಸಹ………….

ಡಿಜಿಟಲ್ ಇಂಡಿಯಾದತ್ತ ಹೆಜ್ಜೆ ಹಾಕುತ್ತಿರುವ ಸಂದರ್ಭದಲ್ಲಿ ಈ ವಂಚಕ ಸಂಸ್ಥೆಗಳ ಅವ್ಯವಹಾರಗಳು ನಮ್ಮ ಕಣ್ಣ ಮುಂದೆಯೇ ನಡೆಯುತ್ತಿರುವುದು ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಅಣಕಿಸುವಂತಿದೆ……

ಸಮೂಹ ಸಂಪರ್ಕ ಮಾಧ್ಯಮಗಳ ಕ್ರಾಂತಿಯಾಗಿ ಎಲ್ಲಾ ಮಾಹಿತಿಗಳು ನಮ್ಮ ಕಣ್ಣ ಮುಂದೆ, ಬೆರಳ ತುದಿಯಲ್ಲಿ ಇರುವಾಗ, ಬ್ಯಾಂಕಿಂಗ್ ವ್ಯವಸ್ಥೆ ವ್ಯಾಪಕವಾಗಿ ಹರಡಿರುವಾಗ, ಕಾನೂನಿನ ಕಣ್ಗಾವಲು ಎಲ್ಲವನ್ನೂ ಸುತ್ತುವರಿದಿರುವಾಗ ಈಗಲೂ  ಜನ ಸಮೂಹಗಳಿಗೆ ಮೋಸವಾಗುತ್ತಿದೆ ಎಂದರೆ ಜನರು ಮುಗ್ಧತೆಗೆ, ಮೂರ್ಖತನಕ್ಕೆ ಮತ್ತು ನಮ್ಮ ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ನಾವೇ ತಲೆ ತಗ್ಗಿಸಬೇಕಾಗಿದೆ…….

ಇಲ್ಲಿ ಜನರ ಅಜ್ಞಾನ, ಅತಿಯಾಸೆ, ತಿಳಿವಳಿಕೆಯ ಕೊರತೆಯನ್ನು ದೂಷಿಸುವುದು ಒಂದು ನೆಪ ಅಥವಾ ಕಾರಣ ಮಾತ್ರ. ಯಾರೋ ಹೇಳುವಂತೆ ಭಾರತ ಮುಂದುವರಿದ ಶ್ರೀಮಂತ ರಾಷ್ಟ್ರವಲ್ಲ. ವಿಶ್ವಗುರುವೂ ಅಲ್ಲ. ಆಂತರ್ಯದಲ್ಲಿ ನಮ್ಮ ದೇಶ ಬಡತನ, ಅಜ್ಞಾನ, ರೋಗ ರುಜಿನಗಳಿಂದ ನರಳುತ್ತಿದೆ. ಇಲ್ಲಿನ ಜನರನ್ನು ಬಹುಬೇಗ ದೇವರ, ಧರ್ಮದ, ಹಣದ, ಜಾತಿಯ ಆಮಿಷ ತೋರಿಸಿ ಯಾಮಾರಿಸಬಹುದು.
ಪೋಲೀಸ್ ಮತ್ತು ಕಾನೂನು ವ್ಯವಸ್ಥೆ ಮೋಸ ಹೋದ ನಂತರವೇ ಪ್ರವೇಶಿಸುತ್ತದೆ. ಅಲ್ಲದೆ ನಿಯಮಗಳು, ನ್ಯಾಯಾಲಯಗಳು ವಂಚಕರಿಗೆ ಹೆಚ್ಚಿನ ಅನುಕೂಲಕರ ವಾತಾವರಣ ಕಲ್ಪಿಸಿದೆ.
ಅಮಾಯಕರು, ನಿರಪರಾಧಿಗಳು ನ್ಯಾಯ ಪಡೆಯಲು ತುಂಬಾ ತುಂಬಾ ಕಷ್ಟ ಪಡಬೇಕು. ಆದರೂ ನ್ಯಾಯ ಸಿಗುತ್ತದೆ ಎಂಬ ಗ್ಯಾರಂಟಿ ಇಲ್ಲ. ಇದು ವಾಸ್ತವ………

ಸಾರ್ವಜನಿಕವಾಗಿ ಅನೇಕ ಜನರಿಗೆ ಅನೇಕ ವರ್ಷಗಳಿಂದ ಅನ್ಯಾಯವಾಗುತ್ತಿದೆ. ಇದು ವಂಚಕ ಕಂಪನಿ ಎಂದು ಗೊತ್ತಿದ್ದರೂ ಆಡಳಿತ ವ್ಯವಸ್ಥೆ ಅದನ್ನು ತಡೆಯುವ ಯಾವ ಪ್ರಯತ್ನವನ್ನೂ ಮಾಡುವುದಿಲ್ಲ. ಬದಲಾಗಿ ಪೋಲೀಸರು ಮತ್ತು ರಾಜಕಾರಣಿಗಳು ಅವರಿಗೆ ನೇರವಾಗಿಯೇ ಸಹಾಯ ಮಾಡುತ್ತಾರೆ……

ಕೆಲವು ವರ್ಷಗಳ ಹಿಂದೆ ನಡೆದ ಘಟನೆಯ ವಿಚಿತ್ರ ನೋಡಿ.
ಇಸ್ಲಾಂ ಧರ್ಮದಲ್ಲಿ ಬಡ್ಡಿ ವ್ಯವಹಾರಗಳಿಗೆ ನಿಷೇಧವಿದೆ. ಆದರೆ ಅದನ್ನು ಅಲ್ಲಿನ ಧರ್ಮದ ಮುಖಂಡರ ಮಾತುಗಳಲ್ಲಿ ತಿರುಚಿ, ಅದಕ್ಕೆ ಬೇರೆ ರೂಪ ನೀಡಿ, ಇದು ಬಡ್ಡಿ ವ್ಯವಹಾರ ಅಲ್ಲ, ನೀವು ಕಂಪನಿಯ ಪಾಲುದಾರರು ಅಥವಾ ಇನ್ವೆಸ್ಟರ್ ಗಳು ಎಂದು ಏನೇನೂ ಹೇಳಿ ಮುಗ್ದ ಜನರನ್ನು ಅದೇ ಧರ್ಮದ ಹೆಸರಿನಲ್ಲಿ ವಂಚಿಸುತ್ತಾರೆ. ಆ ಸಮಯದಲ್ಲಿ ಇದು ದೊಡ್ಡ ಸುದ್ದಿಯಾಗಿತ್ತು. ಅನೇಕ ಮುಸ್ಲಿಂ ಬೇಡ ಕುಟುಂಬಗಳು ಬೀದಿ ಪಾಲಾದವು.
ವಂಚನೆಗೆ – ವಂಚಕರಿಗೆ ಯಾವ ಧರ್ಮ ಆದರೇನು ?…..

ಈ ರೀತಿಯ ಕಂಪನಿಗಳು ಜನರನ್ನು ಸಮೂಹ ಸನ್ನಿಗೆ ಒಳಪಡಿಸುತ್ತವೆ. ದೊಡ್ಡ ದೊಡ್ಡ ಎಂಎಲ್ಎ, ಮಂತ್ರಿಗಳು, ಅಧಿಕಾರಿಗಳು, ಧಾರ್ಮಿಕ ಮುಖಂಡರು, ಶ್ರೀಮಂತರು, ವ್ಯಾಪಾರಿಗಳು ಎಲ್ಲರನ್ನೂ ಇದರೊಳಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಒಳಗೊಳ್ಳುವಂತೆ ಮಾಡುತ್ತಾರೆ. ಸಾರ್ವಜನಿಕ ಸೇವೆಯ ನೆಪದಲ್ಲಿ ಒಂದಷ್ಟು ಹಣವನ್ನು ಅದ್ದೂರಿಯಾಗಿ ಚೆಲ್ಲಿ ಸಮಾರಂಭಗಳನ್ನು ಮಾಡಿ ಜನರನ್ನು ಮರುಳು ಮಾಡುತ್ತಾರೆ. ಸಾವಿರಾರು ಕುರಿಗಳು ಒಟ್ಟೊಟ್ಟಾಗಿ ಬಲೆಗೆ ಬೀಳುತ್ತವೆ………

ಇದಕ್ಕೆಲ್ಲ ನೇರ ಹೊಣೆ ನಮ್ಮ ‌ಆಡಳಿತ ವ್ಯವಸ್ಥೆ. ಕಣ್ಣ ಮುಂದಿನ ಅಪರಾಧಗಳನ್ನು ಬಹಳಷ್ಟು ಬೆಳೆಯಲು ಬಿಟ್ಟು ಅದು ವೃಣವಾಗಿ ಕೊನೆಯ ಹಂತ ತಲುಪಿದಾಗ ಕಣ್ಣೊರೆಸುವ ನಾಟಕ ಮಾಡುತ್ತಾರೆ.
ಜನರ ಅಸಹಾಯಕ ಸ್ಥಿತಿಯನ್ನು ಹೀಗೂ ದುರುಪಯೋಗ ಪಡಿಸಿಕೊಳ್ಳುತ್ತಾರೆ…..

ರಾಜಕಾರಣಿಗಳಿಗೆ ಅಧಿಕಾರ ಸಿಗದಿದ್ದರೆ ಅದು ಅನ್ಯಾಯ, ಎಂಎಲ್ಎಗೆ ಮಂತ್ರಿ ಸ್ಥಾನ ಸಿಗದಿದ್ದರೆ ಅದು ಅನ್ಯಾಯ, ಅಧಿಕಾರಿಗಳಿಗೆ ಬಡ್ತಿ ಸಿಗದಿದ್ದರೆ ಅದು ಅನ್ಯಾಯ, ಚುನಾವಣೆಯಲ್ಲಿ ಜಯ ಗಳಿಸದಿದ್ದರೆ ಅದು ಅನ್ಯಾಯ. ಆದರೆ ಬಡವರಿಗೆ ಸಂಸ್ಥೆಯೊಂದು ಸಾಮೂಹಿಕವಾಗಿ ವಂಚಿಸಿದರೆ ಅದಕ್ಕೆ ಜನರೇ ಹೊಣೆ. ಇದು ನಮ್ಮ ಆಡಳಿತ ವ್ಯವಸ್ಥೆಯ ಮನೋಭಾವ……

ಮತ್ತೆ ಮತ್ತೆ ನಿರಂತರವಾಗಿ ಇಂತಹ ಘಟನೆಗಳು ನಡೆಯುತ್ತಲೇ ಇವೆ. ಎಷ್ಟೋ ಕುಟುಂಬಗಳು ಸರ್ವನಾಶವಾಗಿದೆ. ಅಮಾಯಕರ ನರಳಾಟ ನೋಡಿ ಸಹಿಸಲಾಗುತ್ತಿಲ್ಲ. ಬದಲಾವಣೆ ಎಲ್ಲಿಂದ ಪ್ರಾರಂಭಿಸಬೇಕು ಎಂದು ಅರ್ಥವಾಗುತ್ತಿಲ್ಲ. ಇದಕ್ಕೆ ಮುಕ್ತಿ ಎಂದು ??????????….

ಕಾನೂನುಗಳು ಬಲವಾಗಿದೆ. ಆದರೆ ಅದನ್ನು ಜಾರಿ ಮಾಡುವವರು ವಂಚಕರಾದರೇ ಅಥವಾ ಅಸಹಾಯಕರಾದರೇ !!!!!!!!!

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.


ವಿವೇಕಾನಂದ. ಎಚ್. ಕೆ.