ಮೊನ್ನೆ ಒಂದು ಹಳ್ಳಿಗೆ ಭೇಟಿ ಕೊಟ್ಟಿದ್ದೆ. ಆ ಊರಿನಲ್ಲಿ ನಾನು ಭೇಟಿಕೊಟ್ಟ ಪರಿಶಿಷ್ಟರ ಆ ಬೀದಿಯಲ್ಲಿ ಅಂದು ಚಿತ್ರನಟನೊಬ್ಬನ ವಾರ್ಷಿಕ ಪುಣ್ಯತಿಥಿಯನ್ನು ಅದ್ದೂರಿಯಾಗಿ ಮಾಡುತ್ತಿದ್ದರು. ನಾನು ಪರಿಚಿತ ಸ್ನೇಹಿತರೊಬ್ಬರನ್ನು “ಏನು ಬ್ರದರ್, ಚಿತ್ರನಟರ ಪುಣ್ಯತಿಥಿಯನ್ನು ಇಷ್ಟು ಅದ್ದೂರಿಯಾಗಿ ಮಾಡುತ್ತಿದ್ದೀರಿ. ನಾನು ಕೂಡ ಅವರ ಅಭಿಮಾನಿ” ಎಂದೆ. ಅದಕ್ಕೆ “ಹ್ಞೂಂ ಸರ್, ನಾನಂತೂ ಅವರ ಅಪ್ಪಟ ಅಭಿಮಾನಿ. ಪ್ರತಿ ವರ್ಷ ಅವರ ಪುಣ್ಯತಿಥಿ ತಪ್ಪಿಸೋಲ್ಲ. ಏನೇ ಕಷ್ಟ ಆಗಲಿ ಮಾಡೇ ಮಾಡ್ತೀವಿ”.

ಮುಂದುವರಿದು ನಾನು “ಬ್ರದರ್,
ಅಂದಹಾಗೆ ಇದೇ ಏಪ್ರಿಲ್ 14 ಅಂಬೇಡ್ಕರ್ ಜಯಂತಿ. ನಿಮ್ಮೂರಲ್ಲೂ ಅಂಬೇಡ್ಕರ್ ಜಯಂತಿ ಅದ್ದೂರಿಯಾಗಿ ಮಾಡುತ್ತೀರಿ ತಾನೇ? ಯಾಕೆಂದರೆ ಸಮುದಾಯದಲ್ಲಿ ಇಷ್ಟೊಂದು ಸರ್ಕಾರಿ ನೌಕರರಿದ್ದೀರಿ. ಗ್ರಾಮ ಪಂಚಾಯಿತಿ ಅಧ್ಯಕ್ಷರು ಆಗಿದ್ದೀರಿ. ಮೀಸಲಾತಿ ತಂದುಕೊಟ್ಟ ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುತ್ತೀರಿ ತಾನೇ?”.

ಮಿತ್ರ ಮುಖ ಮುಖ ನೋಡತೊಡಗಿದ. ತಲೆತಗ್ಗಿಸಿ ನಿಂತಿದ್ದ.

ಸುತ್ತಮುತ್ತ ನೋಡಿದೆ ಅಲ್ಲೆಲ್ಲೂ ಅಂಬೇಡ್ಕರ್ ಸಂಘದ ಬೋರ್ಡ್ ಕಾಣಲಿಲ್ಲ. ಮನಸ್ಸು ವಾಸ್ತವಕ್ಕೆ ಜಾರಿತ್ತು. ಮಿತ್ರನ ಪಾಪಪ್ರಜ್ಞೆ ಅರಿವಿಗೆ ಬಂದಿತ್ತು. ಆತನ ಅಂತಹ ಪ್ರಜ್ಞೆಯನ್ನು ಡಿಸ್ಟರ್ಬ್ ಮಾಡದೆ ಬರುತ್ತೇನೆ ಎಂದು ಅಲ್ಲಿಂದ ಹೊರಟೆ. ಬರುವಾಗ ಚಿತ್ರನಟನ ಆ ಪುಣ್ಯತಿಥಿಯ ಫ್ಲೆಕ್ಸ್  ನನ್ನತ್ತ ಒಂದು ಸುಂದರ ನಗು ಬೀರಿತ್ತು. ಮಿತ್ರನನ್ನು, ಆ ಊರಿನ ಇಡೀ ಬೀದಿಯನ್ನು ಅದು ಅಣಕಿಸಿತ್ತು.

-ರಘೋತ್ತಮ ಹೊ.ಬ