ನಾನು ಹೇಳಿದ್ದು ಅರ್ಥವಾಯಿತು ಅವಳಿಗೆ
ಆದರೆ ಸತ್ಯ ಯಾವಾಗಲೂ
ಇಡಿಯಾಗಿ ಕಂಡುಕೊಳ್ಳಬೇಕಾದದ್ದು,
ಒಡೆದು ಹೇಳಿದಾಗಲೆಲ್ಲ ಸುಳ್ಳು ಎನ್ನುವುದನ್ನ
ಬಹುಶಃ ಬೇಕಂತಲೇ
ಅರ್ಥಮಾಡಿಕೊಳ್ಳಲಿಲ್ಲ ಅವಳು.

ಹಾಗಾಗಿ ಅವಳಿಗೆ ಇಲ್ಲ
ತನ್ನ ಚೆಲುವಿನ ಬಗ್ಗೆ ಸಂಪೂರ್ಣ ಮಾಹಿತಿ.
ಅವಳು ಕೇವಲ ತನ್ನ ನಗು ಎಂದುಕೊಂಡದ್ದು
ಜಗತ್ತಿನ ಪಾಲಿಗೆ
ಹಿಪ್ನಾಟಿಸಂನ ಆಖೈರು ಶಾಸನ.
ಅವಳು ಕೇವಲ ಕಣ್ಣೀರು ಎಂದುಕೊಂಡದ್ದು
ಪ್ರೇಮಕ್ಕೆ,  ಸಾವು ಬದುಕಿನ ಗಂಭೀರ ಪ್ರಶ್ನೆ.
ಅವಳ ಹಣೆಯ ಮೇಲಿನ ಗೆರೆಗಳು
ಭವಿಷ್ಯದ ಆತಂಕಕ್ಕೆ ಅಥವಾ ಅವಳ
ಆಕ್ರಮಣಕಾರಿ ಪುಂಡಾಟಕ್ಕೆ ದಿವ್ಯ ಮುನ್ಸೂಚನೆಗಳು.
ಅವಳು ಕುಳಿತಿರುವ ಶೈಲಿಗೆ ಚಾಲಾಕಿ ಸೈತಾನರು
ಮೈ ಮರೆತು ದಿಗ್ಭ್ರಾಂತರಾದರೆ
ಅವಳು ಎದ್ದು ನಿಂತ ಬಿರುಸಿಗೆ ಕಕ್ಕಾವಿಕ್ಕಿಯಾಗುತ್ತಾರೆ
ಭೋಳೆ ದೇವತೆಗಳು.

ಹಾಗಾಗಿಯೇ
ಅವಳ ಚೆಲುವು ಸತ್ಯವಾಗಿದ್ದರೂ
ಅವಳ ನಡೆ ನುಡಿ ಎಲ್ಲವೂ
ಬಿಡಿ ಬಿಡಿಯಾಗಿ ನೋಡಿದಾಗ ಮಾತ್ರ
ಶುದ್ಧ ಸುಳ್ಳು

~ ಚಿದಂಬರ ನರೇಂದ್ರ