
ಬಾಗಲಕೋಟ : ಲೋಕಸಭೆ ಕಾಂಗ್ರೆಸ್ ಟಿಕೆಟ್ ವಂಚಿತರಾದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ತಮ್ಮ ಮುಂದಿನ ನಡೆ ಕುರಿತು ಇಂದು ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆಗಳು ನಿಚ್ಚಳವಾಗಿವೆ.
ಬಾಗಲಕೋಟ ಲೋಕಸಭೆ ಕ್ಷೇತ್ರದ ಟಿಕೆಟ್ ಸಂಯುಕ್ತಾ ಪಾಟೀಲರ ಪಾಲಾಗುತ್ತಿದ್ದಂತೆ ಕ್ಷೇತ್ರದ ಕಾಂಗ್ರೆಸ್ ಪಾಳೆಯದಲ್ಲಿ ಅಸಮಾಧಾನದ ಕುದಿ ಜೋರಾಗಿತ್ತು.
ಅಸಮಾಧಾನ ಶಮನ ಮಾಡಲು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಬೆಂಗಳೂರಿನಲ್ಲಿ ಸಭೆ ಕರೆದು ಮಾತುಕತೆ ನಡೆದರು ಇದುವರೆಗೂ ವೀಣಾ ಕಾಶಪ್ಪನವರ ತಮ್ಮ ನಿಲುವನ್ನು ಪ್ರಕಟಿಸಿಲ್ಲ.
ಕಾಶಪ್ಪನವರ ಪತಿ, ಶಾಸಕ ವಿಜಯಾನಂದ ಕಾಶಪ್ಪನವರ ಅಸಮಾಧಾನ ಮರೆತು ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಮುಂದಾಗಿದ್ದರೂ ವೀಣಾ ಕಾಶಪ್ಪನವರ ಮಾತ್ರ ಯಾವ ನಿರ್ಧಾರಕ್ಕೂ ಬಾರದೇ ಪಕ್ಷವನ್ನು ತುದಿಗಾಲ ಮೇಲೆ ನಿಲ್ಲಿಸಿದ್ದಾರೆ.
ಟಿಕೆಟ್ ಹಂಚಿಕೆ ವಿಷಯದಲ್ಲಿ ತಮಗೆ ಅನ್ಯಾಯವಾಗಿದೆ. ನನಗೆ ನ್ಯಾಯ ಸಿಕ್ಕಿಲ್ಲ ಎಂದು ವಾದದಿಂದ ಅವರು ಈಗಲೂ ಹಿಂದೆ ಸರಿದಿಲ್ಲ. ಹಾಗಾಗಿ ಅವರ ನಿಲುವಿನ ಬಗೆಗೆ ಕ್ಷೇತ್ರದಲ್ಲಿ ಈಗಲೂ ತೀವ್ರ ಕುತೂಹಲ ಕಾಣಿಸುತ್ತಿದೆ.
ಏತನ್ಮಧ್ಯೆ ತಮ್ಮ ಮುಂದಿನ ನಿಲುವು ಏನಾಗಿರುತ್ತದೆ ಎನ್ನುವ ಕುರಿತು ಅವರು ಇಂದು ಸಂಜೆ ಸಮುದಾಯದ ಮುಖಂಡರು ಹಾಗೂ ಅಭಿಮಾನಿಗಳ ಸಭೆ ಕರೆದಿದ್ದಾರೆ. ಆ ಸಭೆಯಲ್ಲಿ ಸುದೀರ್ಘ ಮಾತುಕತೆ ನಡೆಸಿ ಒಂದು ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಅವರ ನಿರ್ಧಾರ ಬಂಡಾಯ ಸ್ಪರ್ಧೆಯೋ ಇಲ್ಲವೆ ಆಗಿರುವ ಅನ್ಯಾಯ ಮರೆತು ಪಕ್ಷದ ಹಿತದೃಷ್ಟಿಯಿಂದ ಪಕ್ಷದ ಅಭ್ಯರ್ಥಿ ಪರ ಪ್ರಚಾರದ ಅಖಾಡಕ್ಕೆ ಇಳಿಯುವರೋ ಎನ್ನುವುದು ಸಂಜೆಯ ಹೊತ್ತಿಗೆ ಸ್ಪಷ್ಟವಾಗಲಿದೆ.
ಅದಕ್ಕೂ ಮುನ್ನ ಸಾಕಷ್ಟು ರಾಜಕೀಯ ಹೈಡ್ರಾಮಾಗಳು ನಡೆಯುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಒಂದೊಮ್ಮೆ ವೀಣಾ ಕಾಶಪ್ಪನವರ ಆಗಿದ್ದೆಲ್ಲವನ್ನು ಮರೆತು ಪಕ್ಷದ ಅಭ್ಯರ್ಥಿ ಗೆಲ್ಲಿಸುವ ಪರ ನಿರ್ಧಾರ ಕೈಗೊಂಡಲ್ಲಿ, ಅಷ್ಟರ ಮಟ್ಟಿಗೆ ಕಾಂಗ್ರೆಸ್ ನಿರಾಳ. ಬಂಡಾಯ ಸ್ಪರ್ಧೆ ನಿರ್ಧಾರ ಪ್ರಕಟಿಸಿದಲ್ಲಿ ಕಾಂಗ್ರೆಸ್ ಪಾಳೆಯದಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ಘಟಿಸುವ ಸಾಧ್ಯತೆಗಳು ಹೆಚ್ಚಿವೆ.