
ಕಿತ್ತೂರು ಸ್ವಾತಂತ್ರ್ಯ ಹೋರಾಟದಲ್ಲಿ ಹಲವಾರು ನಾಯಕರ ಸಮಾಗಮ ಸಾಕಷ್ಟಿದೆ. ಅದರಲ್ಲಿ ಸಂಗೊಳ್ಳಿ ರಾಯಣ್ಣ ,ಅಮಟೂರ ಬಾಳಪ್ಪ ಗಜವೀರ ,ಬಿಚ್ಚುಗತ್ತಿ ಚನ್ನಬಸಪ್ಪ,ವಡ್ಡರ ಯಲ್ಲಣ ಹಲವಾರು ಮಹಾನೀಯರ ದಂಡೆ ಇದೆ .
ಅವರೆಲ್ಲರೂ ಕಿತ್ತೂರು ಉತ್ಸವದ ವಿಜಯೋತ್ಸವಕ್ಕೆ ಕಾರಣೀಭೂತರು ಅವರೆಲ್ಲರನ್ನು ಸ್ಮರಿಸುವುದು ಈ ನಾಡಿನ ಸಮಾಜದ ನೈತಿಕ ಜವಾಬ್ದಾರಿ.
ಇದರಲ್ಲಿ ಹಲವರು ಈಗಾಗಲೇ ಜನಮಾನಸವನ್ನು ತಲುಪಿದ್ದರೆ ಇನ್ನೂ ಕೆಲವರು ಅಜ್ಞಾತವಾಗಿಯೇ ಇದ್ದಾರೆ, ಅವರೆಲ್ಲರನ್ನು ಜನಮಾನಸಕ್ಕೆ ತಲುಪಿಸುವ ಜವಾಬ್ದಾರಿ ಈ ನಾಡಿನ ಇತಿಹಾಸದ ಸಂಜೊತೆಗೆ್ದಾಗಿದೆ.
ಅಜ್ಞಾತ ಹೋರಾಟಗಾಳ ಕುರಿತು ಐತಿಹಾಸಿಕ ದಾಖಲೆಗಳ ಕೊರತೆಯಂತೂ ಸಾಕಷ್ಟು ಕಾಡಿದೆ. ಆದರೆ ಈಗಿರುವ ಲಾವಣಿಗಳು, ಸಿಕ್ಕ ದಾಖಲೆಗಳನ್ನು ಉಪಯೋಗಿಸಿಕೊಂಡು ಕ್ರೋಡಿಕರಿಸಿ ಇತಿಹಾಸ ಕಟ್ಟುವ ಕೆಲಸ ಮಾಡಬೇಕಾಗಿದೆ.
ಕಾರಣ ಅವರ ಕುರಿತು ತಿಳಿಯುವ ತುಡಿತ ಹೆಚ್ಚಾಗುತ್ತಿರುವುದು ಈ ನಾಡಿನ ಜನಮಾನಸದ ಇತಿಹಾಸದ ಪ್ರಜ್ಞೆಯ ಜೀವಂತಿಕೆಯನ್ನು ತೋರಿಸುತ್ತಿದೆ.
ಈ ನಿಟ್ಟಿನಲ್ಲಿ ವಡ್ಡರ ಯಲ್ಲಣ್ಣ ಜೀವನ,ಹೋರಾಟ ಕುರಿತು ತಿಳಿಯುವ ಹಂಬಲ ನಾಡಿನ ಜನಮಾನಸಕ್ಕೆ ಸಾಕಷ್ಟಿದೆ..
ಸಂಗೊಳ್ಳಿ ರಾಯಣ್ಣನ ಹೋರಾಟದಲ್ಲಿ ಬಲಗೈ ಬಂಟನಾಗಿ ಸಾಕಷ್ಟು ಕಾರ್ಯವನ್ನು ನಿರ್ವಹಿಸಿದವನು ವಡ್ಡರ ಯಲ್ಲಣ್ಣ ಆದರೆ ಲಭ್ಯವಿರುವ ದಾಖಲೆಗಳ ಕೊರತೆ ಸಾಕಷ್ಟಿದೆ. ನಿಖರವಾಗಿ ಸಿಕ್ಕ ಮಾಹಿತಿಯನ್ನಾಧರಿಸಿ ವಡ್ಡರ ಯಲ್ಲಣ್ಣನ್ನನ್ನು ಕುರಿತು ತಿಳಿಸುವ ಸಣ್ಣ ಪ್ರಯತ್ನ ಒಂದು ಇದಾಗಿದೆ .
ವಡ್ಡರ ಯಲ್ಲಣ್ಣ ಜನಿಸಿದ್ದು ಬೆಳವಡಿ ಮಲ್ಲಮ್ಮನ ಕರ್ಮಭೂಮಿಯಾದ ಬೆಳವಡಿಯಲ್ಲಿ, ಈ ಭಾಗದಲ್ಲಿ ಸವದತ್ತಿ ಎಲ್ಲಮ್ಮನ ಧಾರ್ಮಿಕ ಪ್ರಭಾವ ಸಾಕಷ್ಟು ದಟ್ಟವಾಗಿರುವ ಕಾರಣ ಈತನಿಗೆ ಯಲ್ಲಣ್ಣ ಎಂಬ ಹೆಸರು ಬಂದಿರಬಹುದು.
1800 ಇಸ್ವಿ ಜನೇವರಿ 28ರಂದು ಬೆಳವಡಿ ಯಲ್ಲಿ ಯಲ್ಲಣ್ಣ ಜನಿಸಿದ ಎಂಬುದು ಪ್ರತೀತಿ.
ಯಲ್ಲಣ್ಣ ಶಬ್ದವೇದಿ ತಂತ್ರವನ್ನು ಕರಗತ ಮಾಡಿಕೊಂಡಿದ್ದು ಆತನ ಯುದ್ದ ತಂತ್ರಗಾರಿಕೆ ಕೌಶಲ್ಯವನ್ನು ಎತ್ತಿತೋರಿಸುತ್ತದೆ.
ಮೂರು ಮೈಲಿ ದೂರದ ಸುತ್ತಮುತ್ತಲಿನಲ್ಲಿ ಶತ್ರು ಸೈನ್ಯ ಆಗಮನ ,ಯಾವ ದಿಕ್ಕಿನತ್ತ ಸಾಗುತ್ತಿದೆ ಎನ್ನುವುದನ್ನು ನೆಲಕ್ಕೆ ಕಿವಿಹಚ್ಚಿ ತಿಳಿಯುವ ಕೌಶಲ್ಯವನ್ನು ಹೊಂದಿದ್ದನು.
ಈ ಕಾರಣಕ್ಕಾಗಿ ಈತನಿಗೆ ಶತ್ರುಗಳ ರಣತಂತ್ರ ಸಹಜವಾಗಿ ಗೊತ್ತಾಗಿ ಅದಕ್ಕೆ ಪ್ರತಿಯಾಗಿ ರಣತಂತ್ರವನ್ನು ರೂಪಿಸಿ ಕಿತ್ತೂರಿನ ಸೈನ್ಯಕ್ಕೆ ಮಾಹಿತಿ ನೀಡುವುದರ ಜೊತೆಗೆ ಪ್ರತಿತಂತ್ರ ರೂಪಿಸುವುದರಲ್ಲಿ ಚಾಣಕ್ಷಣಾಗಿದ್ದನು.
ಕಿತ್ತೂರಿನ ಪತನಾನಂತರ ರಾಯಣ್ಣ ,ವಡ್ಡರ ಯಲ್ಲಣ್ಣ ಮತ್ತು ಅವನ ಸಂಗಡಿಗರಿಗೆ ಕಿತ್ತೂರು ವ್ಯಾಪಾರಸ್ಥರ ಮೇಲೆ
ರೋಷ ಹೆಚ್ಚಾಗುತ್ತಲೇ ಇತ್ತು.
ಕಾರಣ ಜನಸಾಮಾನ್ಯರೆಲ್ಲರೂ ಬ್ರೀಟಿಷರ ವಿರುದ್ದ ಒಕ್ಕೊರಲಿನಿಂದ ಸರ್ವವಿಧದ ಸಹಕಾರ, ಬೆಂಬಲ, ಸಹಾಯ ನೀಡುತ್ತಿದ್ದರೂ ಕಿತ್ತೂರಿನ ಶ್ರೀಮಂತ ವ್ಯಾಪಾರಸ್ಥರು ಮಾತ್ರ ಬ್ರೀಟಿಷರ ಪರವಾಗಿದ್ದರು.
ವಡ್ಡರ ಯಲ್ಲಣ್ಣನ ತಂಡದಲ್ಲಿದ್ದ ಹೋರಾಟಗಾರರಲ್ಲೂ
ಉತ್ಸಾಹ ಉಕ್ಕಿ, ಕಿತ್ತೂರು ಪೇಟೆಯಲ್ಲಿ ಸುತ್ತಾಡಿ ಸೊಕ್ಕಿನವರಿಗೆ ಬುದ್ಧಿಗಲಿಸಲೇಬೇಕೆಂಬ ಒತ್ತಾಯವು ಹೆಚ್ಚುತ್ತಲಿತ್ತು.
ತಾಳ್ಮೆ ವಹಿಸಿ ವ್ಯವಸ್ಥಿತ ಮಾಹಿತಿ ಪಡೆದು, ತಕ್ಕ ಯೋಜನೆ ರೂಪಿಸಿ ಕಿತ್ತೂರ ಮೇಲೆ ದಾಳಿ ಮಾಡೋಣವೆಂಬುವುದು ರಾಯಣ್ಣನ ವಿಚಾರ.
ತಂತ್ರಗಾರಿಕೆಗೆ ಆದ್ಯತೆ ಕೊಟ್ಟು ತಾಳ್ಮೆ ವಹಿಸುವ ಕುಶಲತೆ ರಾಯಣ್ಣನ ತಂಡದವರಿಗೆ ಇರಲಿಲ್ಲ.
ಬೆಳವಡಿಯ ಯಲ್ಲಣ್ಣ ಮತ್ತು ದೇಗಾವಿಯ ಭೀಮಾನಾಯಕ ಮುಂತಾದ ಮುಖಂಡರು ನೇತೃತ್ವವಹಿಸಿ ಮೂರ ನೂರು ಬಂಟರೊಂದಿಗೆ ಹಾಡುಹಗಲೇ ದಿ. ೮-೨-೧೮೩೦ರಂದು ಹಗಲಿನ ಇಳಿಹೊತ್ತಿನ ಸಮಯದಲ್ಲಿಕಿತ್ತೂರಿಗೆ ಬಂದು
ಕೊಂಬು, ಕಹಳೆಗಳ ಅಬ್ಬರ ಮಾಡುತ್ತ ಕಿತ್ತೂರ ಮೇಲೆ ಆಕ್ರಮಣ ಮಾಡಿಯೇ ಬಿಟ್ಟರು, ಆಕ್ರಮಣ ಕಾರ್ಯದಲ್ಲಿ ಸುಮಾರು ೩೦೦ ವೀರರು ಭಾಗಿಯಾಗಿದ್ದರು.
ಆವೇಶದಲ್ಲಿದ್ದ ಬಂಟರು ತಮ್ಮ ಮುಂಗೋಪಿತನದ ಯೋಜನೆಯಂತೆ ಕಿತ್ತೂರಿನ ಬ್ರೀಟಿಷರ ಪರ ಇರುವ ಶ್ರೀಮಂತ ವ್ಯಾಪಾರಸ್ಥರಿಗೆ ಬುದ್ಧಿಗಲಿಸಿದರು .
ಅಂದರೆ ಬ್ರೀಟಿಷರ ಪರ ಇರುವವರನ್ನು ಹಣಿದು ಹಣ್ಣುಗಾಯಿ ನೀರುಗಾಯಿ ಮಾಡಿದರು.
ಕಿತ್ತೂರು ಪೇಟೆಯ ಪ್ರದೇಶದಲ್ಲಿದ್ದವರು ದಿಗಿಲುಗೊಂಡರು. ಕಿತ್ತೂರಿಗೆ ಆಗ ಸೇನೆಯ ಕಾವಲು ಇದ್ದುದರಿಂದ
ಕಾವಲು ಸೇನೆ ತಬ್ಬಿಬ್ಬಾತಿತು.
ಇದೇ ದಿನ ಬ್ರಿಟಿಷ್ ಅಧಿಕಾರಿ #ಲೆಫ್ಟಿನೆಂಟ್_ಕೋರಿ ಕಿತ್ತೂರಿನ ಹೊರವಲಯದ ಗುಡ್ಡದ ಮೇಲೆ ಸೈನ್ಯದೊಂದಿಗೆ ಬಿಡಾರ ಹೂಡಿದ್ದ.
ಹಗಲು ಹೊತ್ತಿನಲ್ಲಿ ನಡೆದ ಈ ಅನಿರೀಕ್ಷಿತ ಆಕ್ರಮಣ ಮತ್ತು ದಾಳಿಕಾರರಾದ ವಡ್ಡರ ಯಲ್ಲಣ್ಣನ ಹುಚ್ಚು ಧೈರ್ಯ ತಿಳಿದು ಆತನ ಜಂಘಾಬಲವೇ ಉಡುಗಿ ಹೋಯಿತು.
ಲೆಫ್ಟಿನೆಂಟ್ ಕೋರಿಯ ತಂಡದಲ್ಲಿದ್ದ ಕುದುರೆದಳದ ಸಂರಕ್ಷಣಾಧಿಕಾರಿ ರಿಸಾಲದಾರ ವಿಷಯವನ್ನು ತಿಳಿದು ತನ್ನ ಕುದುರೆ ದಳದೊಂದಿಗೆ ಬಂಡಾಯಗಾರರಿಗೆ ಎದುರಾಗಿ ನುಗ್ಗಿ ಬಂದನು.
ವಡ್ಡರ ಯಲ್ಲಣ್ಣ ಮತ್ತು ದಾಳಿಕೋರರು ಪಾರಾಗಿ ಹೋಗದಂತೆ ಅವರಿಗೆ ದಿಗ್ಬಂಧನ ಹಾಕಿದ .
ಹೋರಾಟಗಾರರು ಮತ್ತು ಬ್ರಿಟಿಷರ ಸಂಘರ್ಷ ಜೋರಾಗಿತ್ತು. ಬ್ರಿಟಿಷರು ಮತ್ತು ವಡ್ಡರ ಯಲ್ಲಣ ತಂಡಕ್ಕೆ ಹಣಾಹಣಿ ಜೋರಾಯ್ತು.
ವಡ್ಡರ ಯಲ್ಲಣ್ಣ ನ ತಂಡದಲ್ಲಿನ ಸದಸ್ಯರ ರೋಷಾವೇಶದ ಕಾರಣ ಹೆಚ್ಚು ಗಾಯಗಳಾದವು. ಹೀಗಾಗಿ ಎರಡೂ ಬಣದವರು ದೃಷ್ಟಿಯಲ್ಲಿ ಅವರು ತಮ್ಮಷ್ಟಕ್ಕೆ ತಾವೇ ಜಯ ಸಾಧಿಸಿದಂತೆ ಭಾವಿಸಿದರು, ಆದರೆ ಎರಡೂ ಬಣದವರು ತಮ್ಮಷ್ಟಕ್ಕೆ ತಾವೇ ಹಿಂದೆ ಸರಿಯುತ್ತಾ ಸಾಗಿದರು.
ಹೋರಾಟದಲ್ಲಿ ಸಂಗೊಳ್ಳಿ ರಾಯಣ್ಣ ನೇರವಾಗಿ ಭಾಗಿಯಾಗಿರಲಿಲ್ಲ ಹೋರಾಟದ ಜವಾಬ್ದಾರಿಯಲ್ಲ ವಡ್ಡರ ಯಲ್ಲಣ್ಣನನದಾಗಿತ್ತು.
ಈ ದಾಳಿಯಲ್ಲಿ ಕಿತ್ತೂರಿನ ಮೇಲೆ ದಾಳಿ ಮಾಡಿ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡುವಲ್ಲಿ ವಡ್ಡರ ಯಲ್ಲಣ ಸಂಪೂರ್ಣ ಯಶಸ್ವಿಯಾಗಿದ್ದನು.
ವಡ್ಡರ ಯಲ್ಲಣ್ಣನಿಗೆ ಶಬ್ದವೇದಿ ವಿದ್ಯೆ ತಿಳಿದಿರುವ ಕಾರಣ ಈತನನ್ನು ಜೀವಂತವಾಗಿ ಹಿಡಿಯಲು ಬ್ರಿಟಿಷ್ ಸರಕಾರ ಶತಾಯಗತಾಯ ಪ್ರಯತ್ನಿಸಿತ್ತು,
ಆದರೆ ವಡ್ಡರ ಯಲ್ಕಣ್ಣನ ನೇತೃತ್ವದಲ್ಲಿ 8-2-1830ರಂದು ಕಿತ್ತೂರಿನ ವ್ಯಾಪಾರಿಗಳ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿಯೇ ವಡ್ಡರ ಯಲ್ಲಣ್ಣ ನಿಧನವಾಗಿ ರಬಹುದೆಂದು ಒಂದು ತರ್ಕ. ಆದರೆ ಇದೇ ಅಂತ್ಯವಲ್ಲ .
ಇದರ ಕುರಿತು ಸಾಕಷ್ಟು ಸಂಶೋಧನೆ ಆಗಬೇಕಾಗಿದೆ .ಕಿತ್ತೂರು ಹೋರಾಟದಲ್ಲಿ ವಡ್ಡರ ಯಲ್ಕಣ್ಣನ ಹೆಜ್ಜೆಗುರುತುಗಳ ಕುರಿತು ಆಳವಾದ ಸಂಶೋಧನೆ ಬೇಕಾಗಿದೆ ಅದಕ್ಕೆ ಅಗತ್ಯವಾದ ದಾಖಲೆಗಳ ಕೊರತೆಯಂತೂ ಸಾಕಷ್ಟಿದೆ,
೨೦೨೨ರಿಂದ ಕಿತ್ತೂರು ಉತ್ಸವ ರಾಜ್ಯಮಟ್ಟದ ಉತ್ಸವ ವಾಗಿ ಪರಿವರ್ತನೆ ಯಾದ ಕಾರಣ ಶಬ್ದವೇದಿ ವಿದ್ಯೆಯ ಮೂಲಕ ಬ್ರಿಟಿಷರ ಮತ್ತು ಶತ್ರು ಸೈನ್ಯವನ್ನು ಸದೆಬಡೆಯುವಲ್ಲಿ, ಯೋಜನೆ ರೂಪಿಸುವಲ್ಲಿ ಪ್ರಮುಖವಾಗಿದ್ದ ವಡ್ಡರವಯಲ್ಲಣ್ಣ ನನ್ನು ಸ್ಮರಿಸಬೇಕಾದು ನಮ್ಮೆಲ್ಲರ ನೈತಿಕ ಹೊಣೆಗಾರಿಕೆ.
ಹಾಗಾಗಿ ಕಿತ್ತೂರಿನ ಇತಿಹಾಸದಲ್ಲಿ ವಡ್ಡರ ಯಲ್ಲಣ್ಣ ಸದಾ ಸ್ಮರಣೀಯ ,ಸ್ಮರಿಸಬೇಕಾದ ಜವಾಬ್ದಾರಿ ನಮ್ಮೆಲ್ಲರದಾಗಿದೆ.
ಮಹೇಶ ನೀಲಕಂಠ ಚನ್ನಂಗಿ (ಮುಖ್ಯಶಿಕ್ಷಕರು)
ಕಿತ್ತೂರು