ಅವಳು ಸುಮ್ಮನಾದಾಗಿನಿಂದ
ಮಾತಿನ ಜೊತೆ ಮತ್ತೆ ಸಂಧಾನ ಮಾಡುವವರೆಗೆ
ದನಿಯ ಏರಿಳಿತದ ಮಹಿಮೆಗಳ
ಸತತ ಪಾರಾಯಣ ಮಾಡಬೇಕು.

ಬೋರ್ ಡಂ ಶುರುವಾದಾಗಿನಿಂದ
ಮತ್ತೆ ಚಿಗಿತು ಆಕೆ ಲವಲವಿಕೆಯಿಂದ
ಸನ್ನೆ ಮಾಡುವವರೆಗೆ,
ಸಹನೆಗಳ ಸುಮ್ಮಾನದಲಿ ಸಲುಹಬೇಕು.

ನಾಲಿಗೆ ಮರೆತಿರುವ ಫೆವರೇಟ್ ರುಚಿಗಳನು
ಆಕೆ ಮತ್ತೆ ಮತ್ತೆ ಗುನುಗುವವರೆಗೆ
ಹಾಡುಗಳ ಜೋಪಾನ ಮಾಡಬೇಕು
ವ್ಯಾಕ್ಯೂಮ್ ನ  ಹೆಡಮುರಿಗೆ ಕಟ್ಟಬೇಕು.

ಅಕ್ಷರಗಳ ವ್ಯಾಕರಣದಿಂದ ತಪ್ಪಿಸಿಕೊಂಡ
ಅವಳ ಬಿಗಿ ಕವಿತೆಗಳು
ಮತ್ತೆ ಹಗುರಾಗಿ ಫ್ಲರ್ಟಿಂಗ್ ಗೆ ಇಳಿಯುವತನಕ
ಶಾಯಿ ಹೆಪ್ಪುಗಟ್ಟದಂತೆ ಕಾಯಬೇಕು.

ಸಂಕೋಚ ಕರಗಿ
ಸಲಿಗೆ ಮತ್ತೆ ಹತ್ತಿರ ಕರೆಯುವವರೆಗೆ
ಮಾದಕತೆಯ ಕಾಯ್ದಿಟ್ಟುಕೊಂಡ ವೈನ್
ಹೊಸತಾಗಿ ಹಳೆಯಾಗಬೇಕು.

ಪ್ರೀತಿಯನ್ನ ಉಳಿಸಿಕೊಳ್ಳಲು
ನಾನು ಹೆಚ್ಚೇನೂ ಮಾಡಬೇಕಿಲ್ಲ;

ಅವಳ ನಗುವಿನ ಸೆಲೆಯ ಹುಡುಕಬೇಕು
ಮರೆತ ನೆನಪಿನ ಹೊರೆಯ ಇಳಿಸಬೇಕು
ಅವಳ ಹಣೆಗಳ ಗೆರೆಯ ಮೆರೆಯಬೇಕು
ಸೋತ ಉಸಿರಿನ ಮಾನ ಉಳಿಸಬೇಕು.

~ ಚಿದಂಬರ ನರೇಂದ್ರ