
ನಿನ್ನ ಯಾವಾಗಲೂ
ಗಮನಿಸುತ್ತೇನೆ ಒಂದು ದೂರದಿಂದ
ಅಥವಾ
ಕಾಣಿಸುವುದೇ ಇಲ್ಲ ನನಗೆ ನೀನು
ಹತ್ತಿರದಿಂದ.
ನಿನ್ನ ಮಾತು ಕೇಳಿಸುತ್ತದೆಯಾದರೂ
ಮೌನ ಕೇಳಿಸುವುದಿಲ್ಲ
ನಿನ್ನ ನೆರಳು ಕಾಣಿಸುತ್ತದೆಯಾದರೂ
ನಡಿಗೆ ಕಾಣಿಸುವುದಿಲ್ಲ,
ಗೆಜ್ಜೆ ಕೇಳಿಸುತ್ತದೆಯಾದರೂ
ಹೆಜ್ಜೆ ಕಾಣಿಸುವುದಿಲ್ಲ.
ಅರ್ಧ ಜಗತ್ತು ನಿನ್ನ ಹುಡುಕಾಟದಲ್ಲಿ
ದಿನಗಳನ್ನು ಸವೆಸುತ್ತಿದ್ದರೆ
ಇನ್ನರ್ಧ ಜಗತ್ತು ನಿನ್ನಿಂದ ಕಳಚಿಕೊಳ್ಳಲು
ಮುಡಿಪಾಗಿಡುತ್ತಿದೆ ತನ್ನ ರಾತ್ರಿಗಳನ್ನು.
ನೀನು ದೇವತೆಯೆಂದು ಮೋಹಿನಿಯರು
ಮೋಹಿನಿ ಎಂದು ದೇವತೆಯರು
ಪ್ರಮಾಣ ಮಾಡುತ್ತಾರೆ ತಮ್ಮ ಗಂಡಂದಿರ
ಹೆಸರಿನಲ್ಲಿ
ಒಟ್ಟಿನಲ್ಲಿ ಗಂಡಸರಿಗೆ
ಅದೃಷ್ಟದ ಹೊರತಾಗಿ ಇಲ್ಲ ಬೇರೆ
ಯಾವ ದಾರಿ.
ನೀನು ಇರಲಿಕ್ಕಿಲ್ಲ ಬಹುಶಃ
ನನ್ನ ನಸೀಬಿನಲ್ಲಿ
ಆದರೂ ಬಯಸುತ್ತೇನೆ ನಾನು
ನಿನಗೆ ಅರ್ಹನಾಗಿರಲು
ಯಾವತ್ತೂ.
~ ಚಿದಂಬರ ನರೇಂದ್ರ