
1947 – 2024
ಎಲ್ಲಾ ಸರಿ ತಪ್ಪುಗಳ ನಡುವೆ ಭಾರತ ಇತಿಹಾಸದ ಸ್ವರ್ಣಯುಗ ಎಂದರೆ ಈ 77 ವರ್ಷಗಳು, ಅದರಲ್ಲೂ ಕಳೆದ 25 ವರ್ಷಗಳು ನಾಗರಿಕ ಸ್ವಾತಂತ್ರ್ಯದ ನೆಲೆಯಲ್ಲಿ ಅತ್ಯಂತ ಮಹತ್ವದ ಸುವರ್ಣ ಯುಗ ಎಂದು ಕರೆಯಬಹುದು.
ಅದಕ್ಕಾಗಿ ಭಾರತದ ಸಂವಿಧಾನಕ್ಕೆ ಹೃದಯ ಪೂರ್ವಕ ಅಭಿನಂದನೆಗಳು ಮತ್ತು ಧನ್ಯವಾದಗಳನ್ನು ಅರ್ಪಿಸುತ್ತಾ……
ಕೊರತೆಗಳಿವೆ, ಸಮಸ್ಯೆಗಳಿವೆ, ಶೋಷಣೆಗಳಿವೆ, ಬಲಾಡ್ಯರ ದೌರ್ಜನ್ಯವಿದೆ. ಅದೆಲ್ಲದರ ನಡುವೆ ಹಕ್ಕುಗಳಿಗಾಗಿ ಧ್ವನಿ ಎತ್ತುವ ವ್ಯವಸ್ಥೆಯಿದೆ ಎಂಬ ಸಮಾಧಾನದೊಂದಿಗೆ….
ಜನ ಜಾಗೃತಿ ಮತ್ತು ಸಂವಿಧಾನವೇ ನಿಜವಾದ ಧರ್ಮ ಎಂಬ ಮನೋಭಾವ ಸರ್ವವ್ಯಾಪಿಯಾಗಿ ಬಲವಾಗುತ್ತಿರುವ ಕಾರಣದಿಂದಾಗಿ ಗುಂಪು ನಾಯಕತ್ವ, ಸರ್ವಾಧಿಕಾರ, ರಾಜಪ್ರಭುತ್ವದ, ದಾಳಿ ಕೋರರ ಆಡಳಿತ ಮುಂತಾದ ಸಮಯದಲ್ಲಿ ಮನುಷ್ಯರ ಮೂಲಭೂತ ಅವಶ್ಯಕತೆಯಾದ ವ್ಯಕ್ತಿ ಸ್ವಾತಂತ್ರ್ಯ ಈ ಮಟ್ಟದಲ್ಲಿ ಇರಲಿಲ್ಲ ಮತ್ತು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸ್ವಾತಂತ್ರ್ಯ ಸಹ ಈಗಿನಷ್ಟು ಇರಲಿಲ್ಲ ಎಂಬ ಕಾರಣಗಳಿಗಾಗಿ ಇದನ್ನು ಸ್ವರ್ಣ ಯುಗ ಎಂದು ಕರೆಯಲು ಮನಸ್ಸು ಬಯಸುತ್ತಿದೆ.
ಈ 77 ವರ್ಷಗಳನ್ನು ಹೊಗಳಲೂ ಕಾರಣಗಳಿವೆ, ತೆಗಳಲೂ ಕಾರಣಗಳಿವೆ, ಸಮಾಧಾನ ಪಟ್ಟುಕೊಳ್ಳಲು ಸಹ ಕಾರಣಗಳಿವೆ. ಈಗ ಅದನ್ನು ಮೀರಿ ನಮ್ಮ ಕರ್ತವ್ಯಗಳ ಕಡೆ ಗಮನ ಕೊಡುವ ಸಮಯ ಬಂದಿದೆ.
ಭಾರತವೆಂಬ ಭೂ ಪ್ರದೇಶದ ಗಾಳಿ, ನೀರು, ಆಹಾರ ಮಲಿನವಾಗುತ್ತಿರುವುದು ಅತ್ಯಂತ ಗಂಭೀರ ಸಮಸ್ಯೆ. ಇದರಿಂದಾಗಿ ಭಾರತೀಯರ ದೇಹ ಮತ್ತು ಮನಸ್ಸು ದುರ್ಬಲವಾಗುತ್ತಿದೆ. ಅದನ್ನು ಶುದ್ಧವಾಗಿ ಉಳಿಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯ ನಾಗರಿಕರ ಕರ್ತವ್ಯ.
ಮಾನವೀಯ ಮೌಲ್ಯಗಳು ಅಪಾಯಕಾರಿ ಹಂತವನ್ನು ಮೀರಿ ವ್ಯಾಪಾರೀಕರಣವಾಗಿದೆ. ಪ್ರೀತಿ, ಕರಣೆ, ತಾಳ್ಮೆ, ತ್ಯಾಗ, ಸಭ್ಯತೆ, ಸಹಕಾರ, ಸಮನ್ವಯ ಎಲ್ಲವೂ ಹಣ ಅಧಿಕಾರದ ಮೂಲದಿಂದ ಅಳೆಯುವ ಮಾನದಂಡ ಭಾರತದ ಮೂಲ ಸಂಸ್ಕೃತಿಗೆ ಮಾಡುವ ಅವಮಾನ. ಅದನ್ನು ಪುನರುತ್ಥಾನ ಮಾಡುವುದು ನಮ್ಮೆಲ್ಲರ ಕರ್ತವ್ಯ.
ಸಾಮಾಜಿಕ ಸಾಮರಸ್ಯ ಮತ್ತು ನೈತಿಕ ಮೌಲ್ಯಗಳು ತೀರಾ ಕೆಳಹಂತಕ್ಕೆ ತಲುಪಿದೆ. ಜಾತಿ, ಧರ್ಮದ ಹೆಸರಿನಲ್ಲಿ ಹಿಂಸೆ ತುಂಬಾ ಹೆಚ್ಚಾಗಿದೆ. ಒಳ್ಳೆಯವರು ಒಳ್ಳೆಯವರಾಗಿಯೇ ಬದುಕುವುದು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಭ್ರಷ್ಟಾಚಾರ ವ್ಯಾಪಕವಾಗಿದೆ. ಅದನ್ನು ಮತ್ತೆ ಸರಿಯಾದ ಮಾರ್ಗದಲ್ಲಿ ಮುನ್ನಡೆಸುವ ಜವಾಬ್ದಾರಿ ನಮ್ಮ ಮೇಲಿದೆ.
ಇದು ಮೂಲಭೂತವಾಗಿ ಪರಿವರ್ತನೆ ಆಗಬೇಕಾದ ಸಮಸ್ಯೆಗಳು. ನಂತರ ಈ ಮೂಲಕ ಉಳಿದ ಸಮಸ್ಯೆಗಳು ಸಹಜವಾಗಿ ಬದಲಾಗುತ್ತದೆ.
ಆದರೂ ನಮ್ಮ ದೇಶದ ವೈವಿಧ್ಯತೆ ಒಮ್ಮೆ ನೋಡಿ…..
ಮೇಲೆ ನೋಡಿದರೆ ಹಿಮರಾಶಿಯ ಕಾಶ್ಮೀರ,
ಕೆಳಗೆ ನೋಡಿದರೆ ನೀಲಿ ಸಾಗರದ ಕನ್ಯಾಕುಮಾರಿ,
ಪೂರ್ವಕ್ಕೆ ಸಪ್ತ ಸೋದರಿಯರ ಸುಂದರ ನಾಡು,
ಪಶ್ಚಿಮದಲ್ಲಿ ವಾಣಿಜ್ಯ ನಗರಿಯ ಬೀಡು,
ಮಧ್ಯದಲ್ಲಿ ವಿಂಧ್ಯ ಗಿರಿ,
ಅಗೋ ಅಲ್ಲಿ ನೋಡು ಹರಿಯುತ್ತಿದ್ದಾಳೆ ಗಂಗೆ,
ಇಗೋ ಇಲ್ಲಿ ನೋಡು ನಲಿಯುತ್ತಿದ್ದಾಳೆ ಕಾವೇರಿ,
ಅಲ್ಲಲ್ಲಿ ಮುದುನೀಡುವ ಮನೋಹರ ನದಿ ಕಾಡುಗಳು,
ಅಲ್ಲಿಯೇ ಹುಲಿ ಸಿಂಹಗಳ ಘರ್ಜನೆ,
ನವಿಲ ನರ್ತನ, ಕೋಗಿಲೆಯ ಕುಹೂ ಕುಹೂ ಗಾನ,
ಹಾಡಲೊಂದು ಶಾಸ್ತ್ರೀಯ ಸಂಗೀತ,
ಕೇಳಲೊಂದು ಕರ್ನಾಟಕ ಸಂಗೀತ,
ಅಲ್ಲೊಂದಿಷ್ಟು ಮರುಭೂಮಿ,
ಇಲ್ಲೊಂದಿಷ್ಟು ಪಶ್ಚಿಮ ಘಟ್ಟಗಳು,
ಮತ್ತೊಂದಿಷ್ಟು ನಿತ್ಯ ಹರಿದ್ವರ್ಣದ ಕಾಡುಗಳು,
ಓದಲು ರಾಮಾಯಣ, ಮಹಾಭಾರತ,
ಕಲಿಯಲು ಬೃಹತ್ ಸಂವಿಧಾನ,
ಅರಿಯಲೊಬ್ಬ ಬುದ್ದ,
ಅಳವಡಿಸಿಕೊಳ್ಳಲೊಬ್ಬ ಬಸವ,
ಬುದ್ಧಿ ಹೇಳಲೊಬ್ಬ ವಿವೇಕಾನಂದ,
ತಿಳುವಳಿಕೆ ಮೂಡಿಸಲೊಬ್ಬ ಅಂಬೇಡ್ಕರ್,
ಎಲ್ಲರೊಳಗೊಬ್ಬ ಗಾಂಧಿ,
ಗುರುಹಿರಿಯರೆಂಬ ಗೌರವ,
ಮಕ್ಕಳೇ ಮಾಣಿಕ್ಯವೆಂಬ ಸಂಸ್ಕಾರ,
ಆಡಲು ಹಾಕಿ, ನೋಡಲು ಕ್ರಿಕೆಟ್,
ಕಾಯಲೊಬ್ಬ ಪ್ರಧಾನಮಂತ್ರಿ,
ಕರುಣಿಸಲೊಬ್ಬ ಮುಖ್ಯಮಂತ್ರಿ,
ಸಂಭ್ರಮಿಸಲು ಸಂಕ್ರಾಂತಿ,
ಸ್ವಾಗತಿಸಲು ಯುಗಾದಿ,
ಕುಣಿದು ಕುಪ್ಪಳಿಸಲು ಗಣೇಶ,
ಮನರಂಜಿಸಲು ದೀಪಾವಳಿ,
ವಿಜೃಂಬಿಸಲು ದಸರಾ,
ಭಾವೈಕ್ಯತೆಯ ರಂಜಾನ್,
ರಂಗುರಂಗಿನ ಕ್ರಿಸ್ ಮಸ್,
ಸತ್ಯ, ಅಹಿಂಸೆ, ಮಾನವೀಯತೆ ಎಂಬ ಸಂಪ್ರದಾಯ,
ದಯವೇ ಧರ್ಮದ ಮೂಲವಯ್ಯ ಎಂಬ ಸಂಸ್ಕೃತಿ,
ಧನ್ಯ ಈ ನೆಲವೇ ಧನ್ಯ ಧನ್ಯ,
ನನ್ನುಸಿರಾಗಿರುವ ಭಾರತ ದೇಶವೇ,
ನಿನಗೆ ನನ್ನ ಶುಭಾಶಯದ ಹಂಗೇಕೆ,
ನೀನಿರುವುದೇ ನನಗಾಗಿ,
ನನ್ನ ಜೀವವಿರುವುದೇ ನಿನಗಾಗಿ,
ಭಿನ್ನತೆಯಲ್ಲೂ ಐಕ್ಯತೆ,
ಅದುವೇ,
ನಮ್ಮ ಭಾರತೀಯ ಗಣರಾಜ್ಯ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068……
[
16/08, 5:35 am] Vivekananda H K Vivek:
ದರ್ಶನ್ – ಕನ್ನಡ ಚಿತ್ರರಂಗ – ಹೋಮ ಹವನ ಮತ್ತು ನಮ್ಮ ಅಂತರಂಗ……
ಕನ್ನಡ ಚಲನಚಿತ್ರದ ಚಾಲೆಂಜಿಂಗ್ ಸ್ಟಾರ್, ಬಾಕ್ಸ್ ಆಫೀಸ್ ಸುಲ್ತಾನ್, ಈಗ ಕೊಲೆ ಆರೋಪಿ ದರ್ಶನ್ ಬಿಡುಗಡೆಗಾಗಿ ಅವರ ಪತ್ನಿ ರಾಜ್ಯದಾದ್ಯಂತ ಪ್ರಖ್ಯಾತ ಮತ್ತು ಬಹಳ ನಂಬಿಕೆಯ ಪ್ರಸಿದ್ಧ ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರಗಳನ್ನು ಮಾಡಿಸುತ್ತಿದ್ದಾರೆ. ಸತ್ಯಕ್ಕೆ, ನ್ಯಾಯಕ್ಕೆ ಜಯ ಲಭಿಸುತ್ತದೆ ಎಂದು ಹೇಳುತ್ತಿದ್ದಾರೆ. ಹಾಗೆಯೇ ಕನ್ನಡ ಚಿತ್ರರಂಗ ಈ ದರ್ಶನ್ ಬಿಡುಗಡೆಯ ವಿಷಯವನ್ನು ನೆಪವಾಗಿಟ್ಟುಕೊಂಡು ಒಟ್ಟಾರೆಯಾಗಿ ಚಿತ್ರರಂಗದ ಯಶಸ್ಸಿಗಾಗಿ ವಿವಿಧ ಹೋಮ ಹವನಗಳನ್ನು ಮಾಡಿಸುತ್ತಿದೆ….
ಇದು ಅವರವರ ನಂಬಿಕೆಗೆ ಸಂಬಂಧಿಸಿದ ವಿಷಯ. ಇದರಿಂದ ಯಾರಿಗೂ ತೊಂದರೆ ಇಲ್ಲ ಮಾಡಿಕೊಂಡರೆ ಮಾಡಿಕೊಳ್ಳಲಿ ಬಿಡಿ, ಅವರುಗಳು ಒಂದಷ್ಟು ಮಾನಸಿಕ ತೃಪ್ತಿ, ಸಮಾಧಾನ ಪಟ್ಟುಕೊಂಡರೆ ಯಾರಿಗೇನು ನಷ್ಟ ಎಂಬುದು ಕೆಲವರ ವಾದ ಸರಣಿ. ಅದನ್ನು ಗೌರವಿಸಬೇಕಾಗಿರುವುದು ನಮ್ಮ ಕರ್ತವ್ಯವೂ ಸಹ. ಹಾಗೆಯೇ ಅದನ್ನು ಪ್ರಶ್ನಿಸಬೇಕಾಗಿರುವುದು ಸಹ ಇನ್ನೂ ಕೆಲವರ ಜವಾಬ್ದಾರಿ. ಅದನ್ನು ಸಹ ಅವರು ಗೌರವಿಸಬೇಕಾಗುತ್ತದೆ…..
ಈಗ ಈ ವಾದ ಸರಣಿ ಹೋಮ, ಹವನ ಎಂಬ ದೇವರ ಅತಿಮಾನುಷ ಶಕ್ತಿ ಹೆಚ್ಚು ಪ್ರಭಾವಶಾಲೆಯೋ ಅಥವಾ ಮನುಷ್ಯ ಪ್ರಯತ್ನದ ನಮ್ಮ ಅಂತರಂಗ ಹೆಚ್ಚು ಬಲಶಾಲಿಯೋ ಎಂಬುದರ ಸುತ್ತಾ…..
ಸಾಮಾನ್ಯವಾಗಿ ಎಲ್ಲರಲ್ಲೂ ಮೂಡುವ ಪ್ರಶ್ನೆಯೆಂದರೆ, ಒಂದು ವೇಳೆ ದೈವ ಭಕ್ತಿಯಿಂದ ದರ್ಶನ್ ಬಿಡುಗಡೆಯಾಗಿ ಅಥವಾ ಕನ್ನಡ ಚಿತ್ರರಂಗ ಯಶಸ್ವಿಯಾಗುವುದೇ ಆದರೆ ದೇವರು ದರ್ಶನ್ ಕೈಯಲ್ಲೇ ಕೊಲೆ ಮಾಡಿಸಿದ್ದು ಏಕೆ ? ಅಥವಾ ಚಿತ್ರರಂಗವನ್ನು ದುಸ್ಥಿತಿಗೆ ತಂದಿದ್ದು ಏಕೆ ? ಅಥವಾ ದರ್ಶನ್ ಮತ್ತು ಕನ್ನಡ ಚಿತ್ರರಂಗದವರು ದೇವರ ಆಜ್ಞೆಯನ್ನು ಮೀರಿದರೆ ? ದೇವರಿಗೆ ಕೋಪ ಬರುವಂತೆ ನಡೆದುಕೊಂಡರೆ ? ದೇವರ ಪೂಜೆ ಪುನಸ್ಕಾರ, ಕಪ್ಪ ಕಾಣಿಕೆಗಳನ್ನು ಸರಿಯಾಗಿ ಸಲ್ಲಿಸಲಿಲ್ಲವೇ ? ಎಂಬುದು……
ಒಂದು ವೇಳೆ ಆ ಕಾರಣದಿಂದ ಇವರಿಗೆ ಕಷ್ಟ ಬಂದಿದ್ದೇ ಆಗಿದ್ದರೆ ಅದು ದೇವರು ಕೊಟ್ಟ ಶಿಕ್ಷೆ ಆಗಿರುವುದರಿಂದ ಅದನ್ನು ಇವರು ಅನುಭವಿಸಲೇಬೇಕು. ಮತ್ತೆ ಅದರಿಂದ ಎದ್ದು ಬರಲು ದೈವ ಪೂಜೆಯೇ ದಾರಿಯಾಗುವುದಾದರೆ ದೇವರಿಗೂ ಇವರು ವಂಚಿಸಿದಂತೆ ಅಲ್ಲವೇ. ತಪ್ಪು ಮಾಡಿ ಶಿಕ್ಷೆ ಅನುಭವಿಸದೆ ಪೂಜೆ ಪುನಸ್ಕಾರಗಳಿಂದ ಕ್ಷಮಾಪಣೆ ದೊರೆಯುವುದಾದರೆ ದೇವರ ಗುಣ ಧರ್ಮವನ್ನೇ ಪ್ರಶ್ನಿಸಬೇಕಾಗುತ್ತದೆ. ಏಕೆಂದರೆ ಕೊಲೆಯಾದ ರೇಣುಕಾ ಸ್ವಾಮಿಯೂ ದೇವರ ಸೃಷ್ಟಿಯೇ ಅಲ್ಲವೇ. ಅವನ ತುಂಬು ಗರ್ಭಿಣಿ ಪತ್ನಿ ಮತ್ತು ಹೊಟ್ಟೆಯೊಳಗಿನ ಕೂಸಿಗೂ ನ್ಯಾಯ ಸಿಗಬೇಕಲ್ಲವೇ. ಹಾಗೆಯೇ ಕನ್ನಡ ಚಿತ್ರರಂಗದ ಅಭಿಮಾನಿಗಳು ಸಹ ದೇವರ ಮಕ್ಕಳೇ. ಅವರಿಗೂ, ಅವರು ಸಿನಿಮಾ ನೋಡಲು ಕೊಡುವ ಕಾಸಿಗೂ ನ್ಯಾಯ ಸಿಗಬೇಕಲ್ಲವೇ……
ಎಲ್ಲರೂ ಹೇಳುವಂತೆ ದರ್ಶನ್ – ರೇಣುಕಾ ಸ್ವಾಮಿ ಕೊಲೆ ಘಟನೆಯಲ್ಲಿ ಸತ್ಯ ಮತ್ತು ನ್ಯಾಯ ಗೆಲ್ಲುವುದೇ ಆದರೆ ಅದು ದರ್ಶನ್ ಗೆ ಶಿಕ್ಷೆಯಾದಾಗ ಮಾತ್ರ. ಹಾಗಾಗುತ್ತದೆಯೇ ? ಅದನ್ನ ಇವರು ಒಪ್ಪಿಕೊಳ್ಳುವರೇ ? ಒಂದು ವೇಳೆ ದರ್ಶನ್ ಬಿಡುಗಡೆಯಾಗಿ ಅದನ್ನು ಇವರು ಈಗ ಸತ್ಯಕ್ಕೆ ಸಂದ ಜಯ ಎಂದರೆ ಆಗ ದೇವರ ಪಾತ್ರವೇನು? ದೇವರ ಮೇಲೆ ನಮಗೆಲ್ಲ ಹೇಗೆ ನಂಬಿಕೆ ಬರುತ್ತದೆ ? ಹೀಗೆ ಪ್ರಶ್ನೆಗಳ ಸರತಿ ಕಾಡುತ್ತಲೇ ಇರುತ್ತದೆ….
ಇದರ ನಂತರದ ಪ್ರಶ್ನೆ,
ಒಂದು ವೇಳೆ ದರ್ಶನ್ ನಿಜವಾಗಲೂ ಸಂಸ್ಕಾರವಂತರಾಗಿದ್ದರೆ, ಮಾನವೀಯ ಪ್ರಜ್ಞೆಯುಳ್ಳವರಾಗಿದ್ದರೆ, ದೈವಭಕ್ತರಾಗಿದ್ದಿದ್ದರೆ, ತನ್ನನ್ನು ಅಥವಾ ತನ್ನ ಗೆಳತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಹಿಂಸಿಸಿದ ವ್ಯಕ್ತಿಯನ್ನು ಕ್ಷಮಿಸಬಹುದಿತ್ತು, ನಿರ್ಲಕ್ಷಿಸಬಹುದಿತ್ತು, ಬೆದರಿಸಬಹುದಿತ್ತು, ಕಾನೂನಿನ ಮೂಲಕ ಶಿಕ್ಷೆಗೆ ಒಳಪಡಿಸಬಹುದಿತ್ತು. ಅದನ್ನು ಮೀರಿ ದೇವರನ್ನು ಧಿಕ್ಕರಿಸಿ ಅತ್ಯಂತ ಕ್ರೌರ್ಯ ಮೆರೆದ ದರ್ಶನ್ ಗೆ ದೇವರು ಸಹಾಯ ಮಾಡುತ್ತಾನಾದರೆ ದೇವರ ನೈತಿಕತೆಯನ್ನೇ ಪ್ರಶ್ನೆ ಮಾಡಬೇಕಾಗುತ್ತದೆ…….
ಹಾಗೆಯೇ ಕನ್ನಡ ಚಿತ್ರರಂಗದಲ್ಲಿ ಇಲ್ಲಿನ ಮಣ್ಣಿನ ಗುಣವನ್ನು ಮರೆತು, ಜನರ ಮಾನಸಿಕ ಬದಲಾವಣೆಯನ್ನು, ಸಮಾಜದ ಸಾಮೂಹಿಕ ಮನಸ್ಥಿತಿಯನ್ನು ಅರಿಯದೆ, ಬದಲಾಗುತ್ತಿರುವ ತಾಂತ್ರಿಕ ಮತ್ತು ಸ್ಪರ್ಧಾತ್ಮಕ ಜಗತ್ತಿನ ತೀವ್ರತೆಯನ್ನು ಅರ್ಥಮಾಡಿಕೊಳ್ಳದೆ, ಚಲನಚಿತ್ರ ನಿರ್ಮಿಸಿ ಅದು ಹಣ ಮಾಡದ ಕಾರಣಕ್ಕಾಗಿ ಚಿತ್ರರಂಗವೇ ದುಸ್ಥಿತಿಯಲ್ಲಿದೆ ಎಂದು ಅರ್ಥೈಸಿಕೊಳ್ಳುವುದೇ ಮೂರ್ಖತನವಾಗುವುದಿಲ್ಲವೇ.
ಕೇವಲ ಚಿತ್ರರಂಗ ಮಾತ್ರವಲ್ಲ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಯಾವಾಗಲೋ ಒಂದು ಕಾಲಘಟ್ಟದಲ್ಲಿ ಬದಲಾವಣೆಯ ಗಾಳಿ ಬೀಸುತ್ತಲೇ ಇರುತ್ತದೆ. ಆಗ ಆ ಸ್ಪರ್ಧೆಯನ್ನು ದೃಢವಾಗಿ ಎದುರಿಸಿ ನಿಂತವರು ಮಾತ್ರ ಉಳಿಯುತ್ತಾರೆ, ಇಲ್ಲದಿದ್ದರೆ ಆ ಇಡೀ ಕ್ಷೇತ್ರವೇ ನಾಶವಾಗಿ ಹೊಸದೊಂದು ರೂಪದಲ್ಲಿ ಪುನಃ ಹುಟ್ಟು ಪಡೆಯುತ್ತದೆ. ಚಿತ್ರರಂಗದ ವಿಷಯದಲ್ಲಿಯೂ ಹಾಗೆಯೇ ಸಹಜವಾಗಿ ಪರಿವರ್ತನೆ ಆಗುತ್ತಿದೆ. ಆಗ ಒಂದಷ್ಟು ಆತಂಕ, ಗೊಂದಲ ಸಹಜ…….
ಹೋಮ ಹವನಗಳು, ಪೂಜೆ ಪುನಸ್ಕಾರಗಳು ಈ ಎಲ್ಲವನ್ನೂ ಪುನಃಸ್ಥಾಪಿಸಲು, ಯಶಸ್ವಿಯಾಗಲು, ಜೈಲಿನಿಂದ ಬಿಡುಗಡೆಗೊಳಿಸಲು ಸಾಧ್ಯವೇ ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕು. ಯಾವುದೇ ಆಗಿರಲಿ ಸಾರ್ವತ್ರಿಕ ಸತ್ಯವಾಗಿದ್ದರೆ, ವೈಚಾರಿಕವಾಗಿದ್ದರೆ ಒಪ್ಪಿಕೊಳ್ಳೋಣ. ಇಲ್ಲದಿದ್ದರೆ ತಿರಸ್ಕರಿಸೋಣ ಅಥವಾ ಪ್ರಶ್ನಿಸೋಣ. ಕನಿಷ್ಠ ಆ ನಿಟ್ಟಿನಲ್ಲಿ ಯೋಚಿಸೋಣ.
ಹಾಗೆಯೇ ಕನ್ನಡ ಚಿತ್ರರಂಗ ಮತ್ತೆ ಶ್ರಮದಿಂದ, ಕ್ರಿಯಾತ್ಮಕತೆಯಿಂದ, ತನ್ನ ಮಣ್ಣಿನ ಗುಣದಿಂದ ಎದ್ದು ಬಂದು ಯಶಸ್ವಿಯಾಗಲಿ ಎಂದು ಹಾರೈಸೋಣ ಮತ್ತು ಪ್ರೋತ್ಸಾಹ ನೀಡೋಣ…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನ ಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.