
ಬಸವಣ್ಣನವರನ್ನು ಭಕ್ತಿ ಭಂಡಾರಿಯಾಗಿ ಜನರ ಮುಂದೆ ಇಡುತ್ತಾ ಬಂದಿದ್ದಾರೆ ಪಟ್ಟಭದ್ರರು
ಏಕೆಂದರೆ ಬಸವಣ್ಣ ಭಕ್ತಿ ಭಂಡಾರಿ ಆದರೆ ಮಾತ್ರ ಜನರು ವಿಚಾರ ಶಕ್ತಿ ಕಳೆದುಕೊಂಡು ದೇವರು ಧರ್ಮ ಅಂತ ಕೆಲವು ಪುರೋಹಿತರು ಹೇಳಿದ ಆಚರಣೆಗಳನ್ನು ಮಾಡಿಕೊಂಡು ಗುಲಾಮರಂತೆ ಇಟ್ಟುಕೊಳ್ಳ ಬಹುದು ಎಂಬ ದೂರಾಲೋಚನೆ ಇರಬಹುದು
ಬಸವಣ್ಣನವರನ್ನು ಬಂಡಾಯಗಾರನಾಗಿ ಜನತೆಗೆ ಪರಿಚಯ ಮಾಡಿದರೆ ಅಧಿಕಾರಸ್ಥರನ್ನು ಜನ ಪ್ರಶ್ನೆ ಮಾಡುತ್ತಾರೆ
ಆನ್ನುವ ಭಯ ಇರಬಹುದು
ಅದೇನೇ ಇರಲಿ ಬಸವಣ್ಣನವರು ಬಂಡಾಯಗಾರರೇ
ಬಂಡಾಯಗಾರ ಅಂದರೆ ಹೊಡಿ ಬಡಿ ಕೊಲ್ಲು ಎಂದು ಹೇಳುವುದು ಅಲ್ಲ
ಅನ್ಯಾಯದ ವಿರುದ್ಧ ಶೋಷಣೆ ವಿರುದ್ಧ ತಾರತಮ್ಯದ ವಿರುದ್ಧ ದನಿ ಎತ್ತಿದರೂ ಸಹ ಅದು ಬಂಡಾಯವೇ
ಬಸವಣ್ಣನವರನ್ನು ಬಂಡಾಯಗಾರ ಎಂದರೆ ಬಹಳಷ್ಟು ಜನ ನಂಬಲು ಸಿದ್ದರೇ ಇಲ್ಲ
ಆದರೆ ಅವರ ಜೀವನದ ವಿಕ್ರಮಗಳ ಬಗ್ಗೆ ತಿಳಿದರೆ ಅವರ ವಚನಗಳನ್ನು ಓದಿದರೆ ಸ್ಪಷ್ಟವಾಗುತ್ತದೆ ಬಸವಣ್ಣನವರು ಬಂಡಾಯಗಾರರು ಅಂತ
ತನ್ನ ಅಕ್ಕ ಅಕ್ಕ ನಾಗಮ್ಮ ಅವರಿಗೆ ಜನಿವಾರ ಸಂಸ್ಕೃತಿ ಇಲ್ಲ ಕೇವಲ ಗಂಡಸರಿಗೆ ಮಾತ್ರ ಜನಿವಾರ ದೀಕ್ಷೆ ಎಂದು ಅರಿತ ಬಾಲಕ ಬಸವಣ್ಣನವರು ಅದನ್ನು ಪ್ರತಿಭಟನೆ ಮಾಡಿ ಆ ಸಂಸ್ಕೃತಿ ಧಿಕ್ಕರಿಸಿ ಹೊರ ಬಂದರಲ್ಲ ಅದು ಬಂಡಾಯ ಅಲ್ಲವೇ
ಇಬ್ಬರು ಮೂವರೂ ದೇವರು ಎಂಬುದನ್ನು ತಿರಸ್ಕರಿಸಿದ ಬಸವಣ್ಣನವರು
ಮಡಕೆ ದೈವ, ಮೊರ ದೈವ, ಬೀದಿಯ ಕಲ್ಲು ದೈವ, ಹಣಿಗೆ ದೈವ, ಬಿಲ್ಲನಾರಿ ದೈವ, ಕಾಣಿರೊ ! ಕೊಳಗ ದೈವ, ಗಿಣ್ಣಿಲು ದೈವ, ಕಾಣಿರೊ ! ದೈವ ದೈವವೆಂದು ಕಾಲಿಡಲಿಂಬಿಲ್ಲ, ದೈವನೊಬ್ಬನೆ ಕೂಡಲಸಂಗಮದೇವ.
ಎಂಬ ವಚನದಲ್ಲಿ ಸಾಕಷ್ಟು ಸಂಖ್ಯೆಯ ದೇವರನ್ನು ವಿಡಂಬನೆ ಮಾಡಿದ್ದು ಬಂಡಾಯ ಅಲ್ಲವೇ
ಪರಿಶುದ್ಧ ಹಾಲನ್ನು ವಿಗ್ರಹಗಳ ಮೇಲೆ ಸುರಿಯುವ ಹಸಿದು ಬಂದವರಿಗೆ ಉಣ ಬಡಿಸದೆ ವಿಗ್ರಹಗಳಿಗೆ ನೈವೇದ್ಯ ಮಾಡುವ ಕಾರ್ಯವನ್ನು ತಪ್ಪು ಎನ್ನುವ ಬಸವಣ್ಣನವರ ಈ ಕೆಳಗಿನ ವಚನ ಸಾರ ಬಂಡಾಯ ಅಲ್ಲವೇ
ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರುದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾಉಂಬ ಜಂಗಮ ಬಂದಡೆ ನಡೆಯೆಂಬರು, ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ. ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದಡೆ, ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯಾ
ದೇವರ ಪೂಜೆಗೊ ಅದೇ ನೀರು ಕಕ್ಕ ತೊಳೆಯಲು ಅದೇ ನೀರು ಭೇಧ ಎಲ್ಲಿ
ಶಿವನ ದೇವಸ್ಥಾನಕ್ಕೆ ಮತ್ತು ಶೋಷಿತ ಜನ ವಾಸ ಮಾಡುವ ನೆಲ ಒಂದೇ ಎಂದು ಸಮಾನತೆ ಸಾರಿದ ಈ ವಚನದಲ್ಲಿ ಬಂಡಾಯ ಇಲ್ಲವೇ
ನೆಲನೊಂದೆ:ಹೊಲಗೇರಿ ಶಿವಾಲಯಕ್ಕೆ, ಜಲವೊಂದೆ:ಶೌಚಾಚಮನಕ್ಕೆ, ಕುಲವೊಂದೆ:ತನ್ನ ತಾನರಿದವಂಗೆ, ಫಲವೊಂದೆ:ಷಡುದರುಶನ ಮುಕ್ತಿಗೆ, ನಿಲವೊಂದೆ:ಕೂಡಲಸಂಗಮದೇವಾ, ನಿಮ್ಮನರಿದವಂಗೆ.
ದೇವರನ್ನು ದೇವಸ್ಥಾನವನ್ನು ಜಡ ಅಂತ ಕರೆದ ಈ ವಚನದಲ್ಲಿ ಬಂಡಾಯ ಇಲ್ಲವೇ
ಉಳ್ಳವರು ಶಿವಾಲಯ ಮಾಡಿಹರು, ನಾನೇನ ಮಾಡುವೆ ಬಡವನಯ್ಯಾ. ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರ ಹೊನ್ನ ಕಲಶವಯ್ಯಾ. ಕೂಡಲಸಂಗಮದೇವಾ, ಕೇಳಯ್ಯಾ ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.
ಅತ್ಯಂತ ಶ್ರೇಷ್ಠ ಜಾತಿ ಎನಿಸಿದ ಬ್ರಾಹ್ಮಣ ಕುಲದಲ್ಲಿ ಹುಟ್ಟಿದ ಬಸವಣ್ಣನವರು ಅತ್ಯಂತ ಕನಿಷ್ಠ ಜಾತಿ ಎನಿಸಿದ ಮಾದಾರ ಕುಲದಲ್ಲಿ ಹುಟ್ಟಿದ ಚನ್ನಯ್ಯನನ್ನು ಅಪ್ಪ ಎಂದು ಕರೆದ ಈ ವಚನ ಶಾಸ್ತ್ರ ಸಂಪ್ರದಾಯದ ವಿರುದ್ಧ ಸಾರಿದ ಬಂಡಾಯ ಅಲ್ಲವೇ
ಅಪ್ಪನು ನಮ್ಮ ಮಾದಾರ ಚೆನ್ನಯ್ಯ, ಬೊಪ್ಪನು ನಮ್ಮ ಡೋಹರ ಕಕ್ಕಯ್ಯ, ಚಿಕ್ಕಯ್ಯನೆಮ್ಮಯ್ಯ ಕಾಣಯ್ಯ, ಅಣ್ಣನು ನಮ್ಮ ಕಿನ್ನರ ಬೊಮ್ಮಯ್ಯ, ಎನ್ನನೇತಕ್ಕರಿುರಿ, ಕೂಡಲಸಂಗಯ್ಯಾ
ಶಾಸ್ತ್ರ ವೇದ ಪುರಾಣಗಳನ್ನು ಅತ್ಯಂತ ಶ್ರೇಷ್ಠ ಎಂದು ಗೌರವಿಸುತಿದ್ದ ಕಾಲದಲ್ಲಿ
ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ, ತರ್ಕದ ಬೆನ್ನ ಬಾರನೆತ್ತುವ, ಆಗಮದ ಮೂಗ ಕೊಯಿವೆ, ನೋಡಯ್ಯಾ. ಮಹಾದಾನಿ ಕೂಡಲಸಂಗಮದೇವಾ, ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ.
ಎಂದು ವೇದ ಶಾಸ್ತ್ರ ಪುರಾಣಗಳ ನ್ನು ಧಿಕ್ಕರಿಸಿದ ಬಸವಣ್ಣನವರು ಬಂಡಾಯಗಾರರು ಅಲ್ಲವೇ
ಹೆಜ್ಜೆ ಹೆಜ್ಜೆಗೂ ಆ ಕಾಲದಲ್ಲಿ ಇದ್ದ ಶಾಸ್ತ್ರ ಸಂಪ್ರದಾಯ ಶ್ರೇಷ್ಠ ಕನಿಷ್ಠ ಮಡಿ ಮೈಲಿಗೆ ಅಸಮಾನತೆ ಶೋಷಣೆ ವಿರುದ್ಧ ದನಿ ಎತ್ತಿದ ಬಸವಣ್ಣನವರು ಸಹಜವಾಗಿಯೇ ಬಂಡಾಯಗಾರರು ಎಂದುದನ್ನು ಅವರ ವಚನಗಳನ್ನು ಓದಿದರೆ ನಮಗೆ ಅರ್ಥ ಆಗುತ್ತದೆ
-:ಶರಣು ಶರಣಾರ್ಥಿಗಳೊಂದಿಗೆ:-
ವಿಶ್ವೇಶ್ವರಯ್ಯ ಬಸವಬಳ್ಳಿ