
ರಾಕ್ ಲೈನ್ ವೆಂಕಟೇಶ್ ನಿರ್ಮಿಸಿ ತರುಣ್ ಸುಧೀರ್ ನಿರ್ದೇಶಿಸಿದ್ದ ಕಾಟೇರ ಚಿತ್ರ ಭಾರೀ ನಿರೀಕ್ಷೆ ಹುಟ್ಟಿಸಿತ್ತು..
ಕಾಟೇರ ನಿರೀಕ್ಷೆಗೂ ಮೀರಿ ಚಿತ್ರರಸಿಕರ ಮನ ಗೆದ್ದಿದ್ದಾನೆ..
ಎಪ್ಪತ್ತು ಎಂಭತ್ತರ ದಶಕದಲ್ಲಿ ಮೈಸೂರು ಭಾಗದಲ್ಲಿದ್ದ
ಗೇಣಿದಾರರು ಮತ್ತು ಜಮೀನ್ದಾರರ ನಡುವಿನ ಸಂಘರ್ಷ
ಅಸ್ಪೃಶ್ಯತೆಯ ಕರಾಳ ರೂಪವನ್ನ ತರುಣ್ ಸಶಕ್ತವಾಗಿ ನಿರೂಪಿಸಿದ್ದಾರೆ..ಫ್ಲಾಶ್ ಬ್ಯಾಕ್ ತಂತ್ರದಲ್ಲಿ ಕಥೆ ಹೇಳುವ ತರುಣ್ ದರ್ಶನ್ ರನ್ನ ಎರಡು ಶೇಡ್ ಗಳಲ್ಲಿ ತೋರಿಸಿದ್ದಾರೆ
ಕುಲುಮೆಯಲ್ಲಿ ಕಬ್ಬಿಣ ತಟ್ಟುವ ಕಟ್ಟುಮಸ್ತಾದ ಯುವ ಕಾಟೇರ ಹಾಗೂ ವಯಸ್ಕ ಎರಡೂ ಶೇಡ್ ಗಳಲ್ಲಿ ದರ್ಶನ್ ರದ್ದು ಪರಿಪೂರ್ಣ ಅಭಿನಯ..ಹಳೆಮೈಸೂರು ಪ್ರಾಂತ್ಯ ಇಂದಿಗೂ ಒಕ್ಕಲಿಗರ ಬಾಹುಳ್ಯದ್ದು..
ದಲಿತರನ್ನ ಭೂಮಿಯಿಂದ ವಂಚಿಸಿ ಅತಿ ಕಡಿಮೆ ಹಣಕ್ಕೆ ಅವರನ್ನು ದುಡಿಸಿಕೊಳ್ಳುತ್ತಿದ್ದ ಒಕ್ಕಲಿಗರ ದರ್ಪ ದೌರ್ಜನ್ಯಗಳನ್ನು ಜಮೀನ್ದಾರರಾದ ದೇವರಾಯ ಹಾಗೂ ಕಾಳೇಗೌಡರ ಮೂಲಕ ನಿರೂಪಿಸಿದ್ದಾರೆ ನಿರ್ದೇಶಕರು..
ಇಡೀ ಚಿತ್ರವನ್ನು ತನ್ನ ಹೆಗಲ ಮೇಲೆ ಹೊತ್ತು ಸಾಗಿರುವುದು ದೈತ್ಯ ಸ್ವರೂಪಿ ದರ್ಶನ್…ಓರ್ವ ದಲಿತನಾಗಿ ಅವರ ನಟನೆ ಅವರ ಸಿನಿಜರ್ನಿಯಲ್ಲಿಯೇ ಅಪರೂಪದ್ದು..
ದಲಿತರ ಶತಶತಮಾನಗಳ ಅಸಹನೆ ಆಕ್ರೋಶಗಳು ಒಟ್ಟಿಗೆ ಮೇಳೈಸಿ ಆರಡಿ ದೈತ್ಯ ರೂಪ ತಾಳಿ ದರ್ಶನ್ ರೂಪದಲ್ಲಿ ಹೋರಾಟಕ್ಕಿಳಿದಿದೆ ಎಂದು ನೋಡುಗರಿಗೆ ಭಾಸವಾದರೆ ಅಚ್ಚರಿಯೇನಿಲ್ಲ..
“ದೊಡ್ಡವರನ್ನ ಎದುರು ಹಾಕಿಕೊಂಡ್ರೆ ನಮ್ಮನ್ಮು ಬದುಕಲು ಬಿಡ್ತಾರ” ಎನ್ನುವ ಅಕ್ಕನಿಗೆ “ಈಗೇನು ನಾವು ಬದುಕಿದ್ದೀವಿ ಅಂದ್ಕೊಂಡಿದ್ದೀಯಾ” ಎನ್ನುವ ಉತ್ತರ ವ್ಯವಸ್ಥೆಯ ಲೋಪದಿಂದ ಸತ್ತಂತೆ ಬದುಕಿರುವ ದಲಿತರ ಜೀವನಗಾಥೆಯನ್ನ ಧ್ವನಿಸುತ್ತದೆ..
ಹಾಗೂ
ಬ್ರಾಹ್ನಣ ಶಾನುಭೋಗನೊಬ್ಬ “ಅವರು ಜೀವ ಇರುವ ಚಪ್ಪಲಿಗಳು
ನಾವು ಬದುಕಬೇಕು ಅಂದ್ರೆ ಅವರನ್ನ ಮೆಟ್ಟಲೇಬೇಕು” ಎನ್ನುವಾಗ ವ್ಯವಸ್ಥೆ ದಲಿತನನ್ನ ಹೇಗೆ ಸಾಯಿಸಿ ಬದುಕಿಸಿಕೊಂಡಿದೆ ಎನ್ನುವುದು ಅರ್ಥವಾಗುತ್ತದೆ..
ದರ್ಶನ್ ನಂತಹ ಮಾಸ್ ನಾಯಕನಿಂದ ಅಸ್ಪೃಶ್ಯತೆ ಜಾತೀಯತೆಯ ಕುರಿತು ಮಾತನಾಡಿಸಿ ತರುಣ್ ಗಂಭೀರ ಸಾಮಾಜಿಕ ಸಂದೇಶ ನೀಡಿದ್ದಾರೆ..ನಮ್ಮಂಥವರು ಜಾತೀಯತೆಯ ಕುರಿತಾಗಿ ಸಾವಿರ ಲೇಖನಗಳನ್ನು ಬರೆಯುವುದೂ ಒಂದೆ..ಅದ್ಭುತ ಫ್ಯಾನ್ ಫಾಲೋಯಿಂಗ್ ಹೊಂದಿರುವ ದರ್ಶನ್ ನಂಥವರು ತಮ್ಮ ಸಿನಿಮಾಗಳಲ್ಲಿ ಇವುಗಳ ಬಗ್ಗೆ ಮಾತನಾಡುವುದೂ ಒಂದೆ..ಇಷ್ಟೇ ಅಲ್ಲ
ಕಾಟೇರ ಮರ್ಯಾದಾ ಹತ್ಯೆಗೂ ಸಾಕ್ಷಿಯಾಗಿದೆ..ಬ್ರಾಹ್ಮಣರ ಹೆಣ್ಣುಮಗಳು (ನಾಯಕಿ)ದಲಿತನನ್ನ ಪ್ರೀತಿಸಿದ ಸಲುವಾಗಿ
ತಮ್ಮನಿಂದಲೇ ಹತ್ಯೆಗೀಡಾಗುತ್ತಾಳೆ…
“ನೀನು ನಡತೆಗೆಟ್ಟವಳಾಗಿದ್ದರೂ ಒಪ್ಪಿಕೊಳ್ತಿದ್ದೆ..ಆದರೆ ಜಾತಿಗೆಟ್ಟೆಯಲ್ಲೇ” ಅಂತ ಹೇಳ್ತಾ ತಮ್ಮನೊಬ್ಬ ಸ್ವಂತ ಅಕ್ಕನನ್ನೇ ಇರಿಯುವಾಗ ಜಾತಿಯ ಅಮಲನ್ನು ನೆನೆದು ಕಂಡು ಮೈ ನಡುಗುತ್ತದೆ..
ಜಮೀನ್ದಾರರ ಪಾತ್ರಗಳಲ್ಲಿ ಜಗಪತಿ ಹಾಗೂ ವಿನೋದ್ ಆಳ್ವಾರದ್ದು ಸಶಕ್ತ ಅಭಿನಯ…ಥೇಟ್ ಕ್ರೌರ್ಯದಲ್ಲಿ ಅದ್ದಿ ತೆಗೆದ ಹಾಗೆ..ನಟಿ ಮಾಲಾಶ್ರೀ ಪುತ್ರಿ ಆರಾಧನಾ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ..
ಭಾವನಾತ್ಮಕ ಸನ್ನಿವೇಶಗಳಲ್ಲೂ ದರ್ಶನ್ ಅಭಿನಯಕ್ಕೆ ಸಂಫೂರ್ಣ ಅಂಕ..ತನ್ನನ್ನು ಪ್ರೀತಿಸಿದ ಕಾರಣಕ್ಕೆ ಪ್ರಾಣವನ್ನೇ ಕಳೆದುಕೊಂಡ ತನ್ನವಳ ಶವವನ್ನು ಅಪ್ಪಿಕೊಂಡು ಅಳುವಾಗ ಪ್ರೇಕ್ಷಕನೂ ಕಣ್ಣೀರಾಗುತ್ತಾನೆ..ಶ್ರುತಿ..ಕುಮಾರ್ ಗೋವಿಂದ್ ಅಚ್ಯುತ್
ಬೀರದಾರ್ ಎಲ್ಲರದ್ದೂ ಹದವರಿತ ಅಭಿನಯ.
ಸಾಹಸ ದೃಶ್ಯಗಳಲ್ಲಿ ದರ್ಶನ್ ಮದವೇರಿದ ಮದ್ದಾನೆಯಂತೆ ಭಾಸವಾಗುತ್ತಾರೆ..ಅವರ ಅಭಿಮಾನಿಗಳಿಗಂತೂ ಆಗ ಕಣ್ಣಿಗೆ ಹಬ್ಬ…
ಚಿತ್ರದ ಗೆಲುವಿಗೆ ಮಾಸ್ತಿಯವರ ಹರಿತವಾದ ಸಂಭಾಷಣೆ
ಯದ್ದು ಸಿಂಹಪಾಲು..ಕೆಲವು ಕಡೆ goosebumps ಆಗುತ್ತದೆ…ಒಟ್ಟಾರೆ ದರ್ಶನ್ ಸಿನಿಪಯಣದಲ್ಲಿ
ಈ ಚಿತ್ರ ಒಂದು ಮೈಲಿಗಲ್ಲು..ಹಾಗೂ ಕಾಟೇರ ಈ ವರ್ಷದ ಕೊನೆಯ ಯಶಸ್ವೀ ಚಿತ್ರ ಎನ್ನುವಲ್ಲಿ ಅನುಮಾನವೇ ಇಲ್ಲ…