
*ನೆಲ್ಲಿ ಮತ್ತು ರೋಗನಿರೋಧಕ ಶಕ್ತಿಯೂ*
ಕೊರೊನಾ ಎಂಬ ಮಹಾಮಾರಿ ಇಡೀ ವಿಶ್ವವನ್ನೇ ಆಕ್ರಮಿಸಿಕೊಂಡಾಗ ಇಡಿ ವೈದ್ಯ ಲೋಕದಲ್ಲಿ ಹಾಗೂ ಜಗತ್ತಿನಲ್ಲಿ ಕೇಳಿ ಬಂದ ಮಾತು ಎಂದರೆ ಅದು ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎನ್ನುವುದು. ಹಾಗಾದರೆ ಈ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದೆಂತು ಎಂದು ಯೋಚಿಸುವಾಗ ನಾವು ಮಾಡುತ್ತಿದ್ದದ್ದು ನೀರಿಗೆ ತುಳಸಿ ಹಾಕಿ ಕುದಿಸಿ ಕುಡಿಯುವುದು ಅಥವಾ ಅರಶಿನದ ಹುಡಿಯನ್ನು ನೀರಿನಲ್ಲಿ ಬೆರೆಸಿ ಅಥವಾ ಅಡುಗೆಯಲ್ಲಿ ಉಪಯೋಗಿಸುವುದು ಇತ್ಯಾದಿ.
ಇದೇ ರೀತಿ ಇನ್ಯಾವುದೆಲ್ಲ ವಸ್ತುಗಳ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂದು ನಾವಿಂದು ತಿಳಿದುಕೊಳ್ಳೋಣ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಅತಿ ಸುಲಭವಾಗಿ ದೊರೆಯುವ ಒಂದು ವಸ್ತು ಎಂದರೆ ಅದು ನೆಲ್ಲಿಕಾಯಿ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್ ಗಳು ಹೇರಳವಾಗಿದ್ದು ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕರಿಸುತ್ತದೆ. ಅಷ್ಟೇ ಅಲ್ಲದೆ ಇದನ್ನು ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ವೈರಸ್ ಸೋಂಕು, ಶೀತ, ಕೆಮ್ಮು, ಕಫ ಮುಂತಾದ ಸಮಸ್ಯೆಗಳಿಂದ ರಕ್ಷಣೆಯನ್ನು ಪಡೆಯಬಹುದು. ಅದಲ್ಲದೆ ಇದು ಹೆಣ್ಣು ಮಕ್ಕಳಿಗೆ ಅತಿ ಪ್ರಿಯವಾದ ಕೇಶ ರಾಶಿಯ ಪೋಷಣೆಗೂ ಕೂಡ ಒಳ್ಳೆಯ ಮದ್ದಾಗಿದೆ.
ಇನ್ನು ಹೇಳುವುದಾದರೆ ಮಾಂಸ ಭೋಜಕರಿಗೆ ಅತ್ಯಂತ ಪ್ರಿಯವೆಂದೆ ಹೇಳಬಹುದಾದ ಬೆಳ್ಳುಳ್ಳಿ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿರುವುದರಿಂದ ಇದನ್ನು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ . ಅಲ್ಲದೆ ರಕ್ತವನ್ನು ಶುದ್ಧೀಕರಿಸುವಲ್ಲಿ ಸಹಕಾರಿಯಾಗಿದೆ. ಅಲ್ಲದೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದರೊಂದಿಗೆ ಹೃದಯ ಮತ್ತು ಶ್ವಾಸಕೋಶಗಳನ್ನು ಆರೋಗ್ಯವಾಗಿಟ್ಟುಕೊಳ್ಳಲು ಕೂಡ ಪ್ರಯೋಜನಕಾರಿಯಾಗಿದೆ.
ಇನ್ನು ಬರುವುದು ಜೇನುತುಪ್ಪ. ಇದರಲ್ಲಿನ ವಿಟಮಿನ್ ಸಿ, ಬಿ6 ಹಾಗೂ ಕಾರ್ಬೋಹೈಡ್ರೇಟ್ ಮತ್ತು ಆಂಟಿಆಕ್ಸಿಡೆಂಟ್ ಗಳ ಪ್ರಮಾಣ ರೋಗ ನಿರೋಧಕ ಶಕ್ತಿಯನ್ನು ದೇಹದಲ್ಲಿ ವೃದ್ಧಿಸುತ್ತದೆ. ಅಷ್ಟೇ ಅಲ್ಲದೆ ಜೀರ್ಣಕ್ರಿಯೆಯನ್ನು ಕೂಡ ಉತ್ತಮವಾಗಿಸುತ್ತದೆ. ಹಾಗಾಗಿ ಬೆಳಗ್ಗಿನ ಖಾಲಿ ಹೊಟ್ಟೆಗೆ ನೀರಿನಲ್ಲಿ ಜೇನುತುಪ್ಪ ಬೆರಸಿ ಕುಡಿಯುವುದರಿಂದ ಆರೋಗ್ಯ ಸುಸ್ಥಿರವಾಗಿರಲು ಕಾರಣವಾಗುತ್ತದೆ.