
ಸಾಗುತಿರು ಈ ಜಗದಿ
ಸವಾಲುಗಳ ಸಹಜ ಎದುರಿಸಿ
ಇಟ್ಟ ಹೆಜ್ಜೆ ಹಿಂದಿಡದಿರು
ಬಂದ ಹಾದಿ ಮರೆಯದಿರು.
ಕಲ್ಲ ಪೊಟರೆಯಿಂದ ಸೆಟೆದು
ಮೊಳಕೆ ಚಿಗುರಿ ಬೆಳೆವಂತೆ
ನಿನ್ನ ತುಳಿದು ನಗುವವರ
ಮೆಟ್ಟಿ ನಿಂತು ಮೇಲೇರು.
ಕಂಬಳಿ ಹುಳು ತಾ ಅಂತ್ಯಕಂಡು
ಚಿಟ್ಟೆಯಾಗಿ ಜನ್ಮ ಪಡೆವಂತೆ
ಹಳೆತು ಮರೆತು ಭವಿಷ್ಯಕ್ಕೆ
ಹೊಸ ಭಾಷ್ಯ ಬರೆಯುತಲಿರು.
ಸಸ್ಯದ ಅಂಗ ಕತ್ತರಿಸಿತ್ತರು
ಮಣ್ಣಲ್ಲಿ ಮತ್ತೆ ಚಿಗುರುವಂತೆ
ಸಾವಿನ ಆಚೆ ಬದುಕುಂಟು
ಸಾವಿಗೆಂದು ನೀ ಹೆದರದಿರು.
ಜಟಿಲ ಸಮಸ್ಯೆಗಳ ಸರಮಾಲೆ
ಎದುರಾದರೂ ಬೆಟ್ಟದಂತೆ
ಕುಟಿಲತೆ ಜಾಲ ತೊಡವಿ
ಮೇಲೆದ್ದು ಮುಂದೆ ಸಾಗುತಲಿರು.
ಬಳ್ಳಿಯಿಂದ ಕಿತ್ತರು ಮೊಗ್ಗು
ಹೂವಾಗಿ ಅರಳಿ ನಗುವಂತೆ
ನೊಂದು ಬೆಂದು ಸೋತರು
ಸದಾ ನಗು ನಗುತಲಿರು.
ಡಾ. ಮಹೇಂದ್ರ ಕುರ್ಡಿ