ಕೊಲ್ಲುತ್ತದೆ ಎನ್ನುವ ಮಾತಿಗೆ
ಯಾವ ಸಾಕ್ಷ್ಯಗಳಿಲ್ಲ ಹಾಗೆಯೇ
ಬದುಕಿಸುತ್ತದೆ ಎನ್ನುವ ಮಾತಿಗೂ,
ಆದರೂ
ಪ್ರೇಮ ಕಾರಣವಾಗಿ ಎಂಬಂತೆ
ಸತ್ತಿದ್ದಾರೆ ಜನ ಮತ್ತು
ಬದುಕುತ್ತಿದ್ದಾರೆ ಕೂಡ.

ಮನುಷ್ಯರ ನ್ಯಾಯಾಲಯದಲ್ಲಿ
ಸಮರ್ಥ ಸಾಕ್ಷಾಧಾರಗಳಿಲ್ಲದ ಕಾರಣ
ಶಿಕ್ಷೆಯಾಗಿಲ್ಲ ಇನ್ನೂ ಪ್ರೇಮಕ್ಕೆ
ಹಾಗು ಸಾಕ್ಷ್ಯಗಳನ್ನು ನಾಶಮಾಡುವ
ಸಂಶಯವಿರುವುದರಿಂದ
ಬಿಡುಗಡೆಯೂ.

ಷರತ್ತುಬದ್ಧ
ಜಾಮಿನಿನ ಮೇಲಿದೆ ಪ್ರೇಮ,

ತನ್ನ ಆತ್ಮವನ್ನು ರಾತ್ರಿಯ
ನ್ಯಾಯಾಲಯದಲ್ಲಿ ಇಡುಗಂಟಾಗಿಟ್ಟು
ಮತ್ತು ಹಗಲಿನ ನಾಟಕ ಶಾಲೆಗೆ
ಪ್ರತಿನಿತ್ಯ ಹಾಜರ್ ಆಗುವ
ಕರಾರಿನ  ಮೇಲೆ.

~ ಚಿದಂಬರ ನರೇಂದ್ರ