ವೇದ ಮಾರ್ಗವ ಮೀರಿದ ಮಹಾವೇದಿಗಳು ಲಿಂಗಾಯತರು  ಇದು ಉರಿಲಿಂಗ ಪೆದ್ದಿ ಅವರ ವಚನದ ಸಾಲು
ಈ ಒಂದು ಸಾಲಿನಲ್ಲೇ ಶರಣರು ವೇದಗಳನ್ನು ಮೀರಿದವರು ಅಂತ ಗೊತ್ತಾಗುತ್ತದೆ

ಕಿರಣ್ ಕುಮಾರ್ ವಿವೇಕ ವಂಶಿ ಅವರು ದಿನಾಂಕ 10 ಮೇ 2024 ರ ಕನ್ನಡಪ್ರಭ ಪತ್ರಿಕೆಯಲ್ಲಿ  ವೇದ ಲಿಂಗತತ್ವದ ಸಮನ್ವಯಕಾರ ಬಸವಣ್ಣ  ಅಂತ ಲೇಖನ ಬರೆದು ಶರಣರು  ತಿರಸ್ಕರಿಸಿದ ವೇದಗಳನ್ನು ಸಮರ್ಥಿಸುವ ಹುಸಿ ಕಸರತ್ತನ್ನು ಮಾಡಿದ್ದಾರೆ 
ಹಾಗೆಯೇ ವಚನಗಳ ಮೂಲಕ ಗೀತೆ ಸಾರ ಕಟ್ಟಿಕೊಟ್ಟ ಮೇಧಾವಿ  ಅಂತ ಮೇಲ್ಬರಹವನ್ನು ಕೊಟ್ಟಿದ್ದಾರೆ

ಶರಣ ಕಿರಣ್ ಕುಮಾರ್ ಅವರು ಉದ್ದೇಶ ಪೂರ್ವಕವಾಗಿ  ಹಾಗೆ ಹೇಳಿದ್ದಾರೋ ಅಥವಾ ವಚನ ಸಾಹಿತ್ಯದ ಅಜ್ಞಾನದಿಂದ ಹಾಗೆ ಹೇಳಿದ್ದಾರೋ ತಿಳಿಯದು
ಆದರೂ ಅವರಿಗೆ ಈ ಮೂಲಕ ಅಲ್ಪಮಟ್ಟಿಗೆ ಬಸವಣ್ಣನವರು ವೇದ ಶಾಸ್ತ್ರ ಪುರಾಣಗಳನ್ನು ಗೀತೆಯನ್ನು  ತಿರಸ್ಕರಿಸಿದ  ವಚನಗಳ ಮೂಲಕ ಅವರ ಅರಿವನ್ನು ಜಾಗೃತಿ ಮಾಡುವ  ಪ್ರಯತ್ನ  ಮಾಡುತಿದ್ದೇನೆ

ಅವರು ಬಸವಣ್ಣನವರ ಈ ಕೆಳಗಿನ ವಚನವನ್ನು ವಿಶ್ಲೇಷಣೆ ಮಾಡಿ ವೇದಗಳನ್ನು ಸಮರ್ಥಿಸುವ ಕಾರ್ಯ ಮಾಡಿದ್ದಾರೆ

ಶಾಸ್ತ್ರಘನವೆಂಬೆನೆ ಕರ್ಮವ ಭಜಿಸುತ್ತಿದೆ. ವೇದ ಘನವೆಂಬೆನೆ ಪ್ರಾಣವಧೆಯ ಹೇಳುತ್ತಿದೆ. ಶ್ರುತಿ ಘನವೆಂಬೆನೆ ಮುಂದಿಟ್ಟು ಅರಸುತ್ತಿದೆ. ಅಲ್ಲೆಲ್ಲಿಯೂ ನೀವಿಲ್ಲದ ಕಾರಣ, ತ್ರಿವಿಧದಾಸೋಹದಲಲ್ಲದೆ ಕಾಣಬಾರದು ಕೂಡಲಸಂಗಮದೇವನ.
-ಆದರೆ ಈ ವಚನ ಬಹಳ ಸ್ಪಷ್ಟವಾಗಿ  ಹೇಳಿದೆ ಈ ಯಾವ ಅಂಶಗಳು ಅಂದರೆ ಶಾಸ್ತ್ರ  ವೇದ ಶೃತಿ  ಇವುಗಳಲ್ಲಿ  ನೀವು ಅಂದರೆ ದೇವರು   ಇಲ್ಲ  ಹಾಗಾಗಿ ಈ ವೇದ ಶಾಸ್ತ್ರ ಶೃತಿಗಳು ಬೇಡ ಅಂತನೇ ಅರ್ಥ ಆಗುತ್ತದೆ 

ಬಸವಣ್ಣನವರ ಇನ್ನೊಂದು ವಚನದಲ್ಲಿ 


ಗೀತವ ಹಾಡಿದಡೇನು, ಶಾಸ್ತ್ರ-ಪುರಾಣವ ಕೇಳಿದಡೇನು, ವೇದವೇದಾಂತವ ನೋಡಿದಡೇನು ಮನವೊಲಿದು ಲಿಂಗಜಂಗಮವ ಪೂಜಿಸಲರಿಯದವರು ಎಲ್ಲರಲ್ಲಿ [ಪ್ರಾ]ಜ್ಞರಾದಡೇನು ಭಕ್ತಿುಲ್ಲದವರನೊಲ್ಲ ಕೂಡಲಸಂಗಮದೇವ.

ಈ ವಚನದಲ್ಲಿ  ದೇವರ ಒಲುಮೆಗೆ ಯಾವ ಶಾಸ್ತ್ರ ಗೀತೆ  ವೇದ ವೇದಾಂತ ಪುರಾಣಗಳು ಮುಖ್ಯ ಅಲ್ಲ  ಜಂಗಮ ಅಂದರೆ ಸಮಾಜವನ್ನು  ಪ್ರೀತಿಸುವ ಗೌರವಿಸುವ ಜೊತೆಗೆ ನಿಷ್ಕಲ್ಮಶ ಭಕ್ತಿ ಸಾಕು ಎಂದಿದ್ದಾರೆ

ಗೀತವ ಬಲ್ಲಾತ ಜಾಣನಲ್ಲ, ಮಾತ ಬಲ್ಲಾತ ಜಾಣನಲ್ಲ. ಜಾಣನು ಜಾಣನು, ಆತ ಜಾಣನು ಲಿಂಗವ ನೆರೆ ನಂಬಿದಾತ ಜಾಣನು, ಜಂಗಮಕ್ಕೆ ಸವೆಸುವಾತ ಆತ ಜಾಣನು, ಜವನ ಬಾಯಲು ಬಾಲವ ಕೊಯ್ದುಹೋದಾತ ಆತ ಜಾಣನು, ನಮ್ಮ ಕೂಡಲಸಂಗನ ಶರಣರನು.

ಗೀತವ ಬಲ್ಲಾತ ಜಾಣನಲ್ಲ  ಅಂದರೆ ಅರ್ಥ ಗೀತೆ ಮುಖ್ಯ ಅಲ್ಲ ಅಂತನೇ ಆಗುತ್ತದೆ 

ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ, ತರ್ಕದ ಬೆನ್ನ ಬಾರನೆತ್ತುವ, ಆಗಮದ ಮೂಗ ಕೊಯಿವೆ, ನೋಡಯ್ಯಾ. ಮಹಾದಾನಿ ಕೂಡಲಸಂಗಮದೇವಾ, ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ.

ಈ ವಚನದಲ್ಲಿ ಬರುವ ವೇದಕ್ಕೆ ಒರೆಯ ಕಟ್ಟುವೆ ಶಾಸ್ತ್ರಕ್ಕೆ ನಿಗಳವನಿಕ್ಕುವೆ  ಎಂಬ ಮಾತುಗಳು  ಹಿಂದೂ ಧರ್ಮದ  ಮೂಲ ಆಧಾರ ಸ್ಥಂಭಗಳನ್ನೇ ಅಲ್ಲಾಡಿಸಿರುವುದು ಗೊತ್ತಾಗುತ್ತದೆ

ನಾದಪ್ರಿಯ ಶಿವನೆಂಬರು, ನಾದಪ್ರಿಯ ಶಿವನಲ್ಲಯ್ಯಾ. ವೇದಪ್ರಿಯ ಶಿವನೆಂಬರು, ವೇದಪ್ರಿಯ ಶಿವನಲ್ಲಯ್ಯಾ. ನಾದವ ನುಡಿಸಿದ ರಾವಳಂಗೆ ಅರೆ ಆಯುಷ್ಯವಾುತ್ತು. ವೇದವನೋದಿದ ಬ್ರಹ್ಮನ ಶಿರ ಹೋಯಿತ್ತು. ನಾದಪ್ರಿಯನೂ ಅಲ್ಲ, ವೇದಪ್ರಿಯನೂ ಅಲ್ಲ, ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ.

ಶಿವ ವೇದ ಪ್ರಿಯನು ಅಲ್ಲ  ಅವನು ವೇದ ಪ್ರಿಯನು ಆಗಿದ್ದರೆ ವೇದಗಳನ್ನೇ ಓದುತಿದ್ದ ಬ್ರಹ್ಮನ ತಲೆ ಏಕೆ ಕಡಿಯುತಿದ್ದ ಅಂತ ಪುರಾಣಗಳು ಹೇಳಿದ ಕಲ್ಪನೆಯ ಕಥೆಯ ಮೂಲಕ ದೇವರಿಗೆ ವೇದ ಮುಖ್ಯ ಅಲ್ಲ ಎಂಬುದನ್ನು  ತಿಳಿಸುವ ಮೂಲಕ ಜನರಿಗೆ  ವೇದಗಳು ಬೇಡ ಎಂದು ಎಚ್ಚರಿಸಿದ್ದಾರೆ

ವೇದ ನಡನಡುಗಿತ್ತು, ಶಾಸ್ತ್ರವಗಲಿ ಕೆಲಕ್ಕೆ ಸಾರಿದ್ದಿತಯ್ಯಾ ! ತರ್ಕ ತಕರ್ಿಸಲರಿಯದೆ ಮೂಗುವಟ್ಟಿದ್ದಿತಯ್ಯಾ ! ಆಗಮ ಹೆರತೊಲಗಿ ಅಗಲಿದ್ದಿತಯ್ಯಾ ! ನಮ್ಮ ಕೂಡಲಸಂಗಯ್ಯನು ಮಾದಾರ ಚೆನ್ನಯ್ಯನ ಮನೆಯಲುಂಡ ಕಾರಣ.
ಈ ವಚನವು ಸಹ ವೇದಗಳು ಮಾನವೀಯತೆಯ ನಡವಳಿಕೆ ಮುಂದೆ ಮಂಡಿ ಊರಿ ಕುಳಿತು ಕೊಂಡುವು ಎಂದು ವೇದ ಶಾಸ್ತ್ರ ಪುರಾಣಗಳನ್ನು ಬಸವಣ್ಣನವರು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ

ಇನ್ನೂ ಬಸವಣ್ಣನವರ ಜೊತೆಗೆ ಹೆಜ್ಜೆ ಹಾಕಿದ ಶರಣರ ವಚನಗಳನ್ನು ಕೇಳಿದರೆ ನಿಮಗೆ ಚಳಿಯಲ್ಲೂ ಬೇವರು ಬರುತ್ತದೆ  ಅದರ ಒಂದು ಉದಾಹರಣೆಯಾಗಿ ಅಂಬಿಗರ ಚೌಡಯ್ಯ ನವರ ವಚನ ಈ ಕೆಳಕಂಡಂತೆ ಇದೆ

ನಾಲ್ಕು ವೇದವನೋದಿದನಂತರ ಮನೆಯ ಬೋನವ ಶಿವಭಕ್ತರ ಮನೆಯಲ್ಲಿರುವ ನಾಯಿ ಮೂಸಿ ನೋಡಲಾಗದು. ಸಾಮವೇದಿ ಹೋಗುತ್ತಿರಲು ಶ್ವಪಚಯ್ಯಗಳು ತಮ್ಮ ಪಾದುಕದಿಂದ ಪಾಕವ ಮುಚ್ಚಿದರು. “ಶ್ವಾನೋ ಶ್ರೇಷ*ವೆಂದು ಇಕ್ಕಿದೆನು ಮುಂಡಿಗೆಯ. ಎತ್ತಿರೋ ಜಗದ ಸಂತೆಯ ಸೂಳೆಯ ಮಕ್ಕಳು. ಜಗಕ್ಕೆ ಪಿತನೊಬ್ಬನಲ್ಲದೆ ಇಬ್ಬರೆಂದು ಬೊಗಳುವರ ಮೋರೆಯ ಮೇಲೆ ಹೊಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.

ಇಂಥಹ ನೂರಾರು ವಚನಗಳಲ್ಲಿ ಶರಣರು ಹಿಂದೂ ಧರ್ಮದ ಆಚರಣೆಗಳನ್ನು  ವೇದ ಶಾಸ್ತ್ರ ಪುರಾಣಗಳನ್ನು ಒಪ್ಪದೆ
ಹಿಂದೂ ಧರ್ಮದ ಆಚರಣೆಗಳನ್ನು ಬಿಟ್ಟು 
ಹಿಂದೂ ಧರ್ಮದ ಕರ್ಮ ಸಿದ್ದಾಂತಕ್ಕೆ ವಿರುದ್ಧವಾಗಿ  ಕಾಯಕ ಸಿದ್ಧಾಂತ  ಪ್ರತಿಪಾದಿಸಿದ  ಶರಣರು ಹಿಂದೂ ಧರ್ಮದ ಸುಧಾರಕರು ಅಲ್ಲ 
ನವ ಧರ್ಮ ಪ್ರವರ್ತಕರು ಎಂಬುದನ್ನು ನಾವು ನೀವು  ತಿಳಿಯೋಣ

-:ಶರಣು ಶರಣಾರ್ಥಿ ಗಳೊಂದಿಗೆ:-


ವಿಶ್ವೇಶ್ವರಯ್ಯ ಬಿಎಂ ಹೆಮ್ಮನಬೇತೂರು
ಪ್ರದಾನ ಕಾರ್ಯದರ್ಶಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲ್ಲೂಕು