
*ಸೀತಾಫಲ ಮತ್ತು ಬಹುವಿಧ ಉಪಯೋಗಗಳು*
ಪ್ರಕೃತಿಯು ದೇವರು ನಮಗೆ ನೀಡಿರುವ ಒಂದು ಅತ್ಯದ್ಭುತ ಔಷಧಿಯ ಭಂಡಾರ. ಯಾಕೆ ಹೇಳಿ? ಯಾಕೆಂದರೆ ದೇಹಕ್ಕೆ ಅಂಟಿಕೊಳ್ಳುವ ಹಲವಾರು ರೋಗಗಳಿಗೆ ತನ್ನೊಡಲಲ್ಲಿ ಹಲವಾರು ಔಷಧಿಗಳನ್ನು ಈ ಪ್ರಕೃತಿಯು ಹೊಂದಿದೆ.ಅಷ್ಟೇ ಅಲ್ಲದೆ ಮನಸ್ಸಿಗೆ ಅತೀವವಾಗಿ ನೋವಾದಾಗ ಪ್ರಕೃತಿಯ ಮಡಿಲಲ್ಲಿ ಏಕಾಂತದಲ್ಲಿ ಕೂತರೆ ಸಾಕು ಅದೇನು ನೆಮ್ಮದಿ ದೊರೆತ ಭಾವ.ಇದೇ ಪ್ರಕೃತಿಯಲ್ಲಿ ಸಿಗುವ ಸೀತಾಪರದಲ್ಲಿರುವ ಔಷಧೀಯ ಗುಣಗಳ ಬಗ್ಗೆ ನಾವಿಂದು ತಿಳಿದುಕೊಳ್ಳೋಣ.
ಆಂಗ್ಲ ಭಾಷೆಯಲ್ಲಿ ‘ಕಸ್ಟರ್ಡ್ ಆಪಲ್’ ಎಂದು ಕರೆಸಿಕೊಳ್ಳುವ ಈ ಹಣ್ಣು ಆಡು ಭಾಷೆಯಲ್ಲಿ ಸೀತಾಫಲ ಎಂಬ ಹೆಸರನ್ನು ಪಡೆದಿದೆ. ಈ ಹಣ್ಣನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟು
ಪ್ರಯೋಜನಕಾರಿಯೋ ಇದರ ಎಲೆಗಳ ಸೇವನೆ ಕೂಡ ಹಲವು ರೋಗಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಈ ಹಣ್ಣಿನ ಎಲೆಗಳಲ್ಲಿ ಹಲವು ರೀತಿಯ ಔಷಧೀಯ ಗುಣಗಳು ಇದ್ದು ಇದರಲ್ಲಿ ವಿಟಮಿನ್ ಗಳು, ಖನಿಜಗಳು, ಕ್ಯಾಲ್ಸಿಯಂ, ಫೈಬರ್, ಪೊಟ್ಯಾಸಿಯಂ ಇತ್ಯಾದಿಗಳು ಹೇರಳವಾಗಿ ಲಭ್ಯವಿದೆ. ಈ ಹಣ್ಣಿನ ಎಲೆಗಳನ್ನು ಸೇವಿಸುವುದರಿಂದ ಕೆಲವು ಗಂಭೀರ ಕಾಯಿಲೆಗಳನ್ನು ಕೂಡ ಗುಣಪಡಿಸಬಹುದು ಎನ್ನುವುದು ತಜ್ಞರ ಅಭಿಪ್ರಾಯ.
ಹಾಗಾದರೆ ಈ ಎಲೆಗಳ ಸೇವನೆಯಿಂದ ಆಗುವ ಪ್ರಯೋಜನಗಳನ್ನು ನಾವೀಗ ತಿಳಿದುಕೊಳ್ಳೋಣ. ಈ ಎಲೆಯಲ್ಲಿರುವ ವಿಟಮಿನ್ ಸಿ ಯ ಅಂಶಗಳು ಚರ್ಮಕ್ಕೆ ಆರೋಗ್ಯಕರವಾಗಿರುವುದರಿಂದ ಚರ್ಮವನ್ನು ಹೊಳೆಯುವಂತೆ ಮಾಡುವುದರೊಂದಿಗೆ ಚರ್ಮಕ್ಕೆ ಪೋಷಣೆಯನ್ನು ನೀಡುತ್ತದೆ. ಅಷ್ಟೇ ಅಲ್ಲದೆ ಇವುಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿರುವುದರಿಂದ ಚರ್ಮ ಸಂಬಂಧಿ ಕಾಯಿಲೆಗಳನ್ನು ಕೂಡ ಹೋಗಲಾಡಿಸುತ್ತದೆ. ಈ ಎಲೆಗಳಲ್ಲಿರುವ ನಾರಿನ ಅಂಶವು ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ಸ್ಥಿರವಾಗಿರಲು ಸಹಕರಿಸುವುದರೊಂದಿಗೆ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸಿ ಮಧುಮೇಹವನ್ನು ನಿಯಂತ್ರಿಸಲು ಸಹಕಾರಿಯಾಗಿದೆ.
ಸೀತಾಪಲದ ಎಲೆಗಳಲ್ಲಿರುವ ಟ್ಯಾನಿನ್ ಎಂಬ ಆಂಟಿ ಆಕ್ಸಿಡೆಂಟ್ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುವುದರೊಂದಿಗೆ ಇದರಲ್ಲಿರುವ ನಾರಿನ ಅಂಶವು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಿ ಅತಿಸಾರವನ್ನು ತಡೆಯುತ್ತದೆ .ದೇಹವನ್ನು ಹೈಡ್ರೀಕರಿಸುವಲ್ಲಿಯೂ ಕೂಡ ಇದು ಸಹಕಾರಿ.ಅನೇಕ ಸಂಶೋಧನೆಗಳು ಸೀತಾಫಲದ ಎಲೆಯಲ್ಲಿ ಕಂಡುಬರುವ ಫೈಟೋ ಕೆಮಿಕಲ್ ಗಳು ದೇಹದಲ್ಲಿನ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ ಮತ್ತು ಈ ಎಲೆಯಲ್ಲಿನ ವಿಟಮಿನ್ ಸಿ ಮತ್ತು ವಿಟಮಿನ್ ಎ ಅಂಶಗಳು ಕ್ಯಾನ್ಸರ್ ಕೋಶಗಳ ನಾಶಕ್ಕೂ ಸಹಕಾರಿಯಾಗಿದೆ ಎಂದು ತಿಳಿಸಲಾಗಿದೆ.
ಇಷ್ಟೆಲ್ಲ ಔಷಧೀಯ ಗುಣಗಳನ್ನು ಹೊಂದಿರುವ ಸೀತಾಫಲದ ಎಲೆಯನ್ನು ತಜ್ಞ ಆಯುರ್ವೇದ ವೈದ್ಯರ ಸಲಹೆಯೊಂದಿಗೆ ಸರಿಯಾದ ಪ್ರಮಾಣದಲ್ಲಿ ಸೇವಿಸಿ ಆರೋಗ್ಯವನ್ನು ಸುಸ್ಥಿರವಾಗಿಟ್ಟುಕೊಳ್ಳೋಣ ಎಂಬುದು ನಮ್ಮ ಆಶಯ.