*ಮನುಷ್ಯನ ಆಟಕ್ಕೆ ಪ್ರಕೃತಿಯೇ ಉತ್ತರ ಕಲಿಸುತ್ತಿದೆ*

 

ಮಾನವರಾದ ನಾವು ನಮ್ಮ ಸ್ವಾರ್ಥಕ್ಕಾಗಿ ಪರಿಸರ ನಾಶವನ್ನು ಮಾಡುತ್ತಲೇ ಬಂದಿದ್ದೇವೆ. ಆಧುನಿಕತೆಯ ಅಮಲಿನಲ್ಲಿ ತೇಲುತ್ತಿರುವ ನಾವುಗಳು ನಮ್ಮ ಕ್ಷಣದ ಸುಖಕ್ಕಾಗಿ ಪ್ರಕೃತಿದತ್ತ ವಾಗಿ ದೊರೆಯುವ ಪ್ರಕೃತಿ ಸೌಂದರ್ಯವನ್ನು ನಾಶ ಮಾಡುತ್ತಲೇ ಬಂದಿದ್ದೇವೆ. ಆದರೆ ಮನುಷ್ಯನ ಆಸೆಗೆ ಕೊನೆಯಲ್ಲಿ ? ಊಹ್ಮು ಇಲ್ಲವೇ ಇಲ್ಲ. ಪ್ರಕೃತಿ ಕೊಡುತ್ತಾ ಹೋಯಿತು ನಾವು ಕಸಿದುಕೊಳ್ಳುತ್ತಾ ಹೋದೆವು. ಇವೆಲ್ಲದರ ಪರಿಣಾಮವೇ ನಾವು ಇಂದು ಎದುರಿಸುತ್ತಿರುವ ಬರಗಾಲವಾಗಿರಬಹುದು ಸರಿಯಾದ ಪ್ರಮಾಣದಲ್ಲಿ ಮಳೆ ಬರದೇ ಇರವುದು ಇತ್ಯಾದಿಗಳು.

ಇದು ಎಷ್ಟರ ಮಟ್ಟಿಗೆ ಮುಂದುವರಿದಿದೆ ಎಂದರೆ ಅಮೆರಿಕಾದ ನೈರುತ್ಯ ಭಾಗಗಳಲ್ಲಿ ಭೂಮಿಯ ಮೇಲೆ ಬೃಹತ್ ಗಾತ್ರದ ಬಿರುಕು ಕಾಣಿಸಿಕೊಳ್ಳಲು ಪ್ರಾರಂಭಿಸಿದೆ. ಈ ಪರಿಸರ ಬಿಕ್ಕಟ್ಟಿಗೆ ಕಾರಣವೆಂದರೆ ಅತಿಯಾದ ‘ಅಂತರ್ಜಲ ಪಂಪಿಂಗ್’ ಎಂದರೆ ಅಮೆರಿಕಾದಲ್ಲಿ ಕುಡಿಯುವ ನೀರಿನ ಅರ್ಧದಷ್ಟನ್ನು ಭೂಮಿಯಿಂದ ಪಂಪಿಂಗ್ ಮಾಡಲಾಗುತ್ತಿದೆ.ಜಾಗತಿಕ ನೀರಾವರಿಯ ಸರಿಸುಮಾರು 40 ಶೇಕಡದಷ್ಟು ಅಂತರ್ಜಲ ಭೂಮಿಯಲ್ಲಿ ನೈಸರ್ಗಿಕವಾಗಿ ಮರು ಪೂರ್ಣಗೊಳ್ಳುವುದಕ್ಕಿಂತ ವೇಗವಾಗಿ ನೀರನ್ನು ಪಂಪ್ ಮಾಡಲಾಗುತ್ತಿದೆ. ಇದರಿಂದ ಭೂಮಿಯ ಮೇಲೆ ಬೃಹತ್ ಗಾತ್ರದ ಬಿರುಕು ಕಾಣಿಸಿಕೊಳ್ಳುತ್ತಿದೆ ಎಂದು ಬಿಸಿನೆಸ್ ಇನ್ಸೈಡರ್ ವರದಿ ಮಾಡಿದೆ.

ಈ ಬಿರುಕುಗಳನ್ನು ‘ಫಿಶರ್ಸ್’ ಎಂದು ಕರೆಯುತ್ತಾರೆ ಹಾಗೂ ಇವು ಅಮೆರಿಕಾದ ಅರಿಜೋನ, ಉತಾಹ್, ಕ್ಯಾಲಿಫೋರ್ನಿಯ ಸೇರಿದಂತೆ ಇನ್ನು ಹಲವು ರಾಜ್ಯಗಳಲ್ಲಿ ಕಾಣಿಸಿಕೊಂಡಿದೆ. ಇನ್ನು ಅರಿಜೊನ ಭೂ ವೈಜ್ಞಾನಿಕ ಸಮೀಕ್ಷೆಯ ಸಂಶೋಧಕ ಜೋಸೆಫ್ ಕುಕ್ ರವರ ಪ್ರಕಾರ ಈ ಬಿರುಕುಗಳು ನೈಸರ್ಗಿಕವಾಗಿರುವುದಲ್ಲ ಬದಲಾಗಿ ಮಾನವರಿಂದ ಆದಂತಹ ಸಮಸ್ಯೆಗಳ ಪರಿಣಾಮ ಮತ್ತು ಇದು ಭೂಮಿ ಕುಸಿಯಲು ಕಾರಣವಾಗಬಹುದು ಎಂದು ತಿಳಿಸಿದ್ದಾರೆ. ಸಾಮಾನ್ಯವಾಗಿ ಈ ಬಿರುಕುಗಳು ಪರ್ವತಗಳ ನಡುವಿನ ಜಲಾಶಯ ಪ್ರದೇಶಗಳಲ್ಲಿ ಕಾಣಬರುತ್ತದೆ. ಆದರೆ ಈಗ ಇವುಗಳು ಮನೆಗಳಲ್ಲಿ, ರಸ್ತೆಗಳಲ್ಲಿ ಅನಿರೀಕ್ಷಿತವಾಗಿ ಕಂಡುಬಂದದ್ದು ಸ್ಥಳೀಯರಲ್ಲಿ ಭೀತಿಯನ್ನು ಮೂಡಿಸಿದೆ. ಪ್ರಸ್ತುತ ಸಮೀಕ್ಷೆಯ ಪ್ರಕಾರ ಈ ಬಿರುಕುಗಳು ಸುಮಾರು 169 ಮೈಲುಗಳಷ್ಟು ದೂರ ಕಾಣಿಸಿಕೊಡಿದೆ ಎಂದು ತಿಳಿದುಬಂದಿದೆ.

ಈ ವರದಿ ದೂರದ ಅಮೆರಿಕದಲ್ಲಿನ ಸಮಸ್ಯೆ ನಮಗೇನು ಎಂದು ನಾವಿಂದು ಕೈ ಕಟ್ಟಿ ಕುಳಿತರೆ ಮುಂದೊಂದು ದಿನ ನಾವು ಕೂಡ ಇದೇ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಆದುದರಿಂದ ವಿನಾಶ ಹೊಂದಿದ ಮೇಲೆ ಎಚ್ಚೆತ್ತುಕೊಳ್ಳುವುದಕ್ಕಿಂತ ಈಗಲೇ ಎಚ್ಚೆತ್ತುಕೊಂಡು ಪರಿಸರವನ್ನು ಉಳಿಸುವತ್ತ ನಮ್ಮ ಚಿತ್ತವನ್ನು ಹರಿಸೋಣ.