ಐಟಿಸಿ ಸನ್ ಫೀಸ್ಟ್ ಮಾರಿ ಲೈಟ್ ಬಿಸ್ಕೆಟ್ ಪ್ಯಾಕೆಟ್ನಲ್ಲಿ ಜಾಹಿರಾತಿನಲ್ಲಿ ತೋರಿಸಿದ್ದಕ್ಕಿಂತ ಒಂದು ಬಿಸ್ಕೆಟ್ ಕಡಿಮೆ ಇದೆ ಎಂದು ಕೊಟ್ಟ ದೂರು ಗ್ರಾಹಕನಿಗೆ ಬರೋಬ್ಬರಿ ಒಂದು ಲಕ್ಷ ಪರಿಹಾರ ದೊರೆಯುವಂತೆ ಮಾಡಿದೆ. ಚೆನ್ನೈ ಮೂಲದ ದಿಲ್ಲಿ ಬಾಬು ಎಂಬವರು ತಮ್ಮ ಮನೆ ಸುತ್ತ ವಾಸ ಮಾಡುವ ಬೀದಿ ನಾಯಿಗಳಿಗೆ ತಿನ್ನಿಸುವ ಸಲುವಾಗಿ ಐಟಿಸಿ ಲಿಮಿಟೆಡ್‌ಗೆ ಸೇರಿದ ಸನ್‌ಫಿಸ್ಟ್ ಮಾರಿ ಲೈಟ್ ಬಿಸ್ಕೆಟ್‌ ಪ್ಯಾಕೇಟೊಂದನ್ನು ಖರೀದಿ ಮಾಡಿದ್ದರು. ಪ್ಯಾಕೇಜ್ ನ ಮೇಲೆ ಬಿಸ್ಕೆಟ್ ನ ಪ್ರಮಾಣ 16 ಎಂದು ನಮೂದಿಸಲಾಗಿದ್ದು, ಒಳಗಡೆ ಕೇವಲ 15 ಬಿಸ್ಕೆಟ್ ಮಾತ್ರ ಇರುವುದನ್ನು ಗಮನಿಸಿದ ದಿಲ್ಲಿಬಾಬು ಸ್ಥಳೀಯ ವ್ಯಾಪಾರಿಗಳಲ್ಲಿ ಬಗ್ಗೆ ವಿಚಾರಿಸುತ್ತಾರೆ. ವ್ಯಾಪಾರಿಗಳಿಗೂ ಈ ಬಗ್ಗೆ ತಿಳಿಯದಿದ್ದಾಗ ನೇರವಾಗಿ ಐಟಿಸಿ ಸಂಸ್ಥೆಯ ಬಳಿ ಜಾಹಿರಾತಿನಲ್ಲಿ 16 ಬಿಸ್ಕೆಟ್ ವಾಸ್ತವವಾಗಿ 15 ಬಿಸ್ಕೆಟ್ ಮಾತ್ರ ಏಕಿದೆ ಎಂದು ಪ್ರಶ್ನಿಸುವ ಬಾಬು ಅವರು ಅಲ್ಲಿಯೂ ಉತ್ತರ ಸಿಗದಿದ್ದಾಗ ಕೋರ್ಟ್ ನ ಮೆಟ್ಟಿಲೇರುತ್ತಾರೆ. ದೂರಿನಲ್ಲಿ ಐಟಿಸಿ ಕಂಪನಿಯು ಉದ್ದೇಶಪೂರ್ವಕವಾಗಿ ಗ್ರಾಹಕರಿಗೆ ವಂಚಿಸುತ್ತಿದ್ದು, ಒಂದು ಬಿಸ್ಕೆಟ್ ಗೆ 75 ಪೈಸೆಯಂತೆ ದಿನಕ್ಕೆ 50 ಲಕ್ಷ ಪ್ಯಾಕೆಟ್ ಗೆ ಸುಮಾರು 29 ಲಕ್ಷದಷ್ಟು ಲಾಭ ಮಾಡುತ್ತಿದೆ ಎಂದು ದಾಖಲಿಸಿದ್ದಾರೆ. ವಾದ ವಿವಾದಗಳ ಬಳಿಕ ಪ್ಯಾಕೇಟ್‌ನಲ್ಲಿ ಸ್ಪಷ್ಟವಾಗಿ 16 ಬಿಸ್ಕೆಟ್‌ಗಳು ಇರುವ ಬಗ್ಗೆ ನಮೂದಿಸಿ ಪ್ಯಾಕೇಟ್ ಒಳಗೆ ಒಂದು ಬಿಸ್ಕೆಟ್ ಕಡಿಮೆ ಮಾಡಿರುವುದು ತಪ್ಪು ಎಂದಿರುವ ನ್ಯಾಯಾಲಯ, ದಿಲ್ಲಿ ಬಾಬು ಅವರಿಗೆ 1 ಲಕ್ಷ ಪರಿಹಾರ ನೀಡುವಂತೆ ಐಟಿಸಿ ಸಂಸ್ಥೆಗೆ ದಂಡ ವಿಧಿಸಿದೆ.