ಐತಿಹಾಸಿಕ ಹಿನ್ನಲೆ ಹೊಂದಿರುವ ಕಾಮಕಸ್ತೂರಿ

ಕಾಮ ಕಸ್ತೂರಿಯು ತುಳಸಿಯ ಜಾತಿಗೆ ಸೇರಿದ ಒಂದು ಸಸಿಯಾಗಿದೆ.ಇದರ ಸಸ್ಯಶಾಸ್ತ್ರೀಯ ಹೆಸರು ಆಸಿಮಮ್ ಬಸಿಲಿಕಮ್. ಇದನ್ನು ಇಂಗ್ಲಿಷ್ನಲ್ಲಿ ಬೇಸಿಲ್ ಅಥವಾ ಸ್ವೀಟ್ ಬೇಸಿಲ್ ಎಂದು ಕರೆಯಲಾಗುತ್ತದೆ.ಇದರ ಬೀಜವು ದೇಹಕ್ಕೆ ತಂಪಾಗಿದೆ ಇದರಿಂದ ಪಾನೀಯವನ್ನು ಮಾಡಿ ಸೇವಿಸಿದರೆ ಒಳ್ಳೆಯದು.
ಕಾಮ ಕಸ್ತೂರಿಯ ಮೂಲ ಮಧ್ಯ ಏಷ್ಯಾ ಮತ್ತು ಭಾರತ.ಆದರೆ ಕೆಲವು ಐತಿಹಾಸಿಕ ದಾಖಲೆಗಳಲ್ಲಿ ಇದ್ದಂತೆ ಈ ಗಿಡವು ಚೈನಾ ದೇಶದ ಹುನಾನ್ ಪ್ರಾಂತ್ಯದಲ್ಲಿ ಬೆಳೆಸುತ್ತಿದ್ದರೆಂದು ತಿಳಿದು ಬಂದಿದೆ.ಅಷ್ಟಲ್ಲದೆ ಅದನ್ನು ಕಡೆದು ಅದರ ಮಿಶ್ರಣವನ್ನು ದೈವಾದೀನರಾದವರ ಮಮ್ಮಿಗಳಿಗೆ ಹಾಕುವುದು ಮತ್ತು ಸಮಾಧಿಯ ಮುಂದೆ ಈ ಗಿಡದ ಎಲೆಯನ್ನು ಇಟ್ಟರೆ ಸುರಕ್ಷಿತವಾಗಿ ದೈವಾದೀನರಾಗಬಹುದು ಎಂಬುದು ನಂಬಿಕೆಯಾಗಿತ್ತೆಂದು ತಿಳಿದು ಬಂದಿದೆ.ಈ ಕಾಮಕಸ್ತೂರಿ ಗಿಡವು ಮೂವತ್ತರಿಂದ ನೂರು ಸೆಂಟಿಮೀಟರ್ ಎತ್ತರಕ್ಕೆ ಬೆಳೆಯುತ್ತದೆ.ಇದರ ಮೇಲ್ಮೈಯು ಕಾಣಲು ತುಳಸಿ ಎಲೆಯಂತೆ ಇದ್ದು ಮೊಟ್ಟೆಯಾಕರವಾಗಿ ಕಾಣುತ್ತದೆ.ಇದರ ಹೂವು ಮೇಲ್ಮುಖ ತ್ರಿಭುಜಾಕಾರವಾಗಿದ್ದು, ಅರೆ ಬಿಳಿ ಇಲ್ಲವಾದರೆ ಅರೆ ನೀಲಿ ಬಣ್ಣದಲ್ಲಿ ಕಂಡುಬರುತ್ತದೆ.ಇದರ ರುಚಿಯು ಸ್ವಲ್ಪ ಉಪ್ಪಾಗಿದ್ದು ಅಲ್ಪ ಮಟ್ಟದ ಲವಂಗ ಮಿಶ್ರಿತ ಸುವಾಸನೆ ಹೊಂದಿರುತ್ತದೆ.
ಕಾಮಕಸ್ತೂರಿಯು ಅತ್ಯಂತ ಔಷಧೀಯ ಗುಣ ಹೊಂದಿದ್ದು,ಇದರ ಬೀಜ ಮತ್ತು ಒಣಗಿಸಿದ ಎಲೆಯನ್ನು ಮದ್ದಿನ ರೂಪದಲ್ಲಿ ಬಳಸಲಾಗುತ್ತದೆ.ಇದರಲ್ಲಿ ಫ್ಲೆವೊನಾಯ್ಡ್ ಅಂಶವು ಹೆಚ್ಚಾಗಿರುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗಿದೆ.ಇದರ ರಸಕ್ಕೆ ಜೇನುತುಪ್ಪ ಬೆರೆಸಿ ಸೇವಿಸಿದರೆ ಗಂಟಲು ನೋವು ನಿವಾರಣೆಗೊಳ್ಳುತ್ತದೆ.